ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಬಳಿಕ ಭದ್ರತೆಗಾಗಿ ನಗರದ ವಿವಿಧ ಪೊಲೀಸರು ಠಾಣಾ ವ್ಯಾಪ್ತಿಗಳಲ್ಲಿ ಗಸ್ತು ಕಾಯುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡುವ ನಗರ ಪೊಲೀಸರಿಗೆ ದಿನಕ್ಕೆರಡು ಬಾರಿ ಊಟ ನೀಡುತ್ತಿದೆ ಮರ್ಸಿ ಮಿಷನ್ ಎನ್.ಜಿ.ಸಂಸ್ಥೆ.
20 ಕ್ಕಿಂತ ಹೆಚ್ಚು ಎನ್ಜಿಒಗಳನ್ನು ಹೊಂದಿರುವ ಮರ್ಸಿ ಮಿಷನ್ ಸಂಸ್ಥೆ, ಹಲವು ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಪ್ರತಿದಿನ ಎರಡು ಬಾರಿಯಂತೆ ಒಟ್ಟು 800 ಜನರಿಗೆ ಊಟ ನೀಡುತ್ತಿದೆ.
ಪೊಲೀಸರಿಗೆ ಊಟ ನೀಡುವ ಜೊತೆಗೆ ಗಲಭೆಯಲ್ಲಿ ಹಾನಿಗೊಳಗಾದ ಡಿ.ಜೆ.ಹಳ್ಳಿ ಠಾಣೆಯನ್ನು ಮತ್ತೆ ಮೊದಲಿನಂತೆ ಮಾಡಿಕೊಡುವ ಭರವಸೆ ನೀಡುತ್ತಾರೆ ಸಂಸ್ಥೆಯ ಸದಸ್ಯರಾದ ಮುಶಾದಿಕ್.
ಆ.11 ರಂದು ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ಮೇಲೆ ಗಲಭೆಕೋರರು ದಾಳಿ ಮಾಡಿದ್ದಾರೆ. ಯಾರೋ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಪಾಲಿಗೆ ಮೂಸಂಬಿ ಅಂಕಲ್: ಕೊರೊನಾದಿಂದ ಹೇರಲ್ಪಟ್ಟಿದ್ದ ಲಾಕ್ಡೌನ್ ವೇಳೆ ಮುಶಾದಿಕ್ ಅವರು ಸುಮಾರು 38 ಕಿಚನ್ಗಳನ್ನು ತೆರೆದು, ಸುಮಾರು 4 ಲಕ್ಷ ಜನರ ಹೊಟ್ಟೆ ತುಂಬಿಸಿದ್ದಾರೆ. ಸುಮಾರು 70 ಸಾವಿರ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದಾರೆ. ವಲಸೆ ಕಾರ್ಮಿಕರು, ಪ್ರಯಾಣ ಮಾಡುವವರಿಗೆ, ರೈಲುಗಳಲ್ಲಿ ಸಂಚರಿಸುವವರಿಗೆ ಊಟದ ಜೊತೆಗೆ ಮೂಸಂಬಿ ನೀಡುತ್ತಿದ್ದರು. ಹೀಗೆ ಮೂಸಂಬಿ ನೀಡುವ ಮೂಲಕ ಪ್ರಯಾಣಿಕರ ಪಾಲಿಗೆ ಮೂಸಂಬಿ ಅಂಕಲ್ ಎಂದೇ ಗುರುತಿಸಿಕೊಂಡಿದ್ದರು.
400 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದ ಸಂಸ್ಥೆ: ಕೊರೊನಾ ವೈರಸ್ನಿಂದ ಸಾವನ್ನಪ್ಪಿರುವ ಮೃತರಿಗೆ ವಿಧಿವಿಧಾನಗಳ ಮೂಲಕ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಿದೆ.