ಬೆಂಗಳೂರು: ಮೇಕೆದಾಟು ಪಾದಯಾತ್ರೆಯಿಂದ ಸುಸ್ತಾಗಿರುವ ರಾಜ್ಯ ಕಾಂಗ್ರೆಸ್ ನಾಯಕರು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಬಿಡದಿವರೆಗೆ ತಲುಪಿದ್ದ ಪಾದಯಾತ್ರೆಯನ್ನು ಕೋವಿಡ್ ಹೆಚ್ಚಳ ಹಿನ್ನೆಲೆ ಅರ್ಧಕ್ಕೆ ಮೊಟಕಗೊಳಿಸಲಾಗಿತ್ತು. ಇದನ್ನು ಕೆಲ ದಿನಗಳ ನಂತರ ಮುಂದುವರೆಸಲು ತೀರ್ಮಾನಿಸಲಾಗಿದೆ.
ಜನವರಿ 9ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಸಮೀಪದ ಅರ್ಕಾವತಿ ಹಾಗೂ ಕಾವೇರಿ ಸಂಗಮ ಸ್ಥಳದಿಂದ ಪಾದಯಾತ್ರೆ ಹೊರಟು ಬಿಡದಿವರೆಗೆ ತಲುಪಿದ್ದ ಪಾದಯಾತ್ರೆಯನ್ನು ಕೋವಿಡ್ ಹೆಚ್ಚಳ ಹಿನ್ನೆಲೆ ನಿಲ್ಲಿಸಲಾಗಿದ್ದು, ಕೆಲ ದಿನಗಳ ನಂತರ ಮುಂದುವರಿಸಲು ತೀರ್ಮಾನಿಸಲಾಗಿದೆ. ನಿರಂತರ ಐದು ದಿನ ನಡೆದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕರಲ್ಲಿ ವಿಪರೀತ ಸುಸ್ತು ಹಾಗೂ ಕೆಲವರಲ್ಲಿ ಅನಾರೋಗ್ಯದ ಸಮಸ್ಯೆ ಸಹ ಕಾಡಿದೆ.
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ವಿಪರೀತ ಸುಸ್ತಾಗಿದ್ದು, ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಮೊದಲ ದಿನ ಪಾದಯಾತ್ರೆ ಸಂದರ್ಭದಲ್ಲಿ ಜ್ವರಕ್ಕೆ ತುತ್ತಾಗಿ ಬೆಂಗಳೂರಿಗೆ ಹಿಂದಿರುಗಿದ ಸಿದ್ದರಾಮಯ್ಯ ಎರಡು ದಿನ ವಿಶ್ರಾಂತಿ ಬಳಿಕ ಮೂರನೇ ದಿನದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಆದರೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಮಾರನೇ ದಿನ ಹಿಂದಿರುಗಿದ್ದರು. ಐದನೇ ದಿನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅವರು ಪಾದಯಾತ್ರೆಯನ್ನು ನಿಲ್ಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆ ವಾಪಸ್ ಬಂದಿದ್ದರು. ಪಾದಯಾತ್ರೆಯಲ್ಲಿ 3 ದಿನ ಭಾಗಿಯಾಗಿದ್ದ ಅವರು ಸಹ ಸಾಕಷ್ಟು ದಣಿದಿದ್ದು, ಮುಂದಿನ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ಡೌನ್ ಇಲ್ಲ, ವೀಕೆಂಡ್ ಕರ್ಫ್ಯೂ ಸೇರಿ ಕಠಿಣ ನಿಯಮ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ
ಇಂದು ಬೆಳಗ್ಗೆ ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಿಂದ ಮೈಸೂರಿಗೆ ಪ್ರಯಾಣ ಬೆಳೆಸಿರುವ ಸಿದ್ದರಾಮಯ್ಯ, ಮುಂದಿನ 3 ದಿನ ನಿರಂತರ ವಿಶ್ರಾಂತಿಗೆ ಮೊರೆ ಹೋಗಲಿದ್ದಾರೆ. ಮೈಸೂರಿನಲ್ಲಿ ಇರುವ ಅವರ ತೋಟದಲ್ಲಿ ವಿಶ್ರಾಂತಿ ಪಡೆಯಲಿರುವ ಸಿದ್ದರಾಮಯ್ಯ ಮಧ್ಯೆ ಕೆಲ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಸಹ ಮೈಸೂರಿಗೆ ತೆರಳುವ ಮುನ್ನ ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೆಳಗಾವಿಯಲ್ಲಿ ಮಕ್ಕಳ ಸಾವು ಸಂಭವಿಸಿರುವ ವಿಚಾರವೂ ಸೇರಿದಂತೆ ಯಾವುದೇ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಮೈಸೂರಿಗೆ ಪ್ರಯಾಣ ಬೆಳೆಸಿದರು.
ಡಿಕೆಶಿ ನಿವಾಸದ ಬಳಿ ಬೆಳವಣಿಗೆ:
ಕಳೆದ ಎರಡು ದಿನಗಳಿಂದ ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇದೀಗ ಕೆಲ ನಾಯಕರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ. ಮನೆಯಿಂದ ಆಚೆ ತೆರಳದೆ ವಿವಿಧ ನಾಯಕರನ್ನು ತಮ್ಮ ಮನೆಗೆ ಕರೆಸಿಕೊಂಡು ಚರ್ಚಿಸುತ್ತಿದ್ದಾರೆ. ವಿಶ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಿರುವ ಅವರು ದಿನಕ್ಕೆ ಎರಡರಿಂದ ಮೂವರ ಭೇಟಿಗೆ ಮಾತ್ರ ಸೀಮಿತರಾಗಿದ್ದಾರೆ.
ಬೆಮೆಲ್ ಕಾಂತರಾಜ್ ಭೇಟಿ:
ಡಿಕೆಶಿ ನಿವಾಸಕ್ಕೆ ಆಗಮಿಸಿದ ಜೆಡಿಎಸ್ ಮಾಜಿ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಕೆಲಕಾಲ ಸಮಾಲೋಚಿಸಿ ತೆರಳಿದ್ದಾರೆ. ಸದ್ಯದಲ್ಲಿ ಕಾಂಗ್ರೆಸ್ ಸೇರಲಿರುವ ಬೆಮೆಲ್ ಕಾಂತರಾಜ್ ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಮೂರ್ನಾಲ್ಕು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ. ಇವರ ಪರಿಷತ್ ಸದಸ್ಯತ್ವ ಅವಧಿ ಮುಗಿದಿದ್ದು, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ಗೆ ಉತ್ತಮ ಅವಕಾಶಗಳು ಇದ್ದು, ಹಾಲಿ ಬಿಜೆಪಿ ಶಾಸಕ ಮಸಾಲೆ ಜಯರಾಮ್ ವಿರುದ್ಧ ತಮಗೆ 2023ರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷದಿಂದ ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.
1957 ರಿಂದ ಇಲ್ಲಿಯವರೆಗೆ ನಡೆದ ವಿಧಾನಸಭೆ ಚುನಾವಣೆಗಳ ಪೈಕಿ ಅತಿ ಹೆಚ್ಚು ಬಾರಿ ಕ್ಷೇತ್ರದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಏಳು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಕಳೆದ ಅವಧಿಯಲ್ಲಿ ಬಿಜೆಪಿಯ ಮಸಾಲೆ ಜಯರಾಮ್ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷ ಕಳೆದ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಎಂ ಟಿ ಕೃಷ್ಣಪ್ಪ ಅಭ್ಯರ್ಥಿಯಾಗಿ ಕಣದಲ್ಲಿದ್ದರು. 2013ರ ಚುನಾವಣೆಯಲ್ಲಿ ಎಂ ಟಿ ಕೃಷ್ಣಪ್ಪ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷ ನಿಧಾನವಾಗಿ ಕ್ಷೇತ್ರದ ಹಿಡಿತ ಕಳೆದುಕೊಳ್ಳುತ್ತಿದ್ದು, ಜೆಡಿಎಸ್ ಮುಖಂಡರಾಗಿರುವ ಬೆಮೆಲ್ ಕಾಂತರಾಜ್ಗೆ ಟಿಕೆಟ್ ನೀಡಿದರೆ ಗೆಲ್ಲುವ ಅವಕಾಶ ಹೆಚ್ಚಬಹುದು ಎಂದು ಸಹ ನಿರೀಕ್ಷಿಸಲಾಗುತ್ತಿದೆ.