ಬೆಂಗಳೂರು : ಮಾರ್ಚ್ 27ರಂದು ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ನಡೆಯಲಿದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಯೂ ಆಗಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಅರವಿಂದ್ ಕುಮಾರ್ ಕರೆ ನೀಡಿದ್ದಾರೆ.
ಈ ಕುರಿತು ಇಂದು ಸಂಜೆ ಹೈಕೋರ್ಟ್ ಪ್ಯಾಟ್ರನ್ ಇನ್ ಚೀಫ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನ್ಯಾ. ಅರವಿಂದ್ ಕುಮಾರ್, ಕಕ್ಷಿದಾರರು ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ನಲ್ಲಿ ಬಗೆಹರಿಸಿಕೊಳ್ಳಲು ಮುಂದಾಗಬೇಕು.
ಆದಾಲತ್ನಲ್ಲಿ ಮೋಟರು ವಾಹನ ಅಪಘಾತ ಪ್ರಕರಣಗಳು, ಹಣಕಾಸು ವ್ಯಾಜ್ಯಗಳು ಸೇರಿ ರಾಜಿ ಮಾಡಿಕೊಳ್ಳಬಹುದಾದ ಯಾವುದೇ ಬಗೆಯ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಈ ಅವಕಾಶವನ್ನು ಕಕ್ಷಿದಾರರು ಬಳಸಿಕೊಳ್ಳಲು ಮುಂದಾಗಬೇಕು ಎಂದರು.
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 20,22,284 ಲಕ್ಷ ಪ್ರಕರಣಗಳು ಬಾಕಿಯಿವೆ. ಇದರಲ್ಲಿ 2,74,684 ಪ್ರಕರಣಗಳನ್ನು ಮೆಗಾ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಲು ಗುರುತಿಸಲಾಗಿದೆ. ಇದಲ್ಲದೇ, ಆ ದಿನ ಉಭಯ ಕಕ್ಷಿದಾರರು ತಮ್ಮ ವಕೀಲರೊಂದಿಗೆ ಆಗಮಿಸಿ ಅಂದೇ ತಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಲು ಕೋರಬಹುದು ಎಂದರು.
ಇದೇ ವೇಳೆ ಹಿಂದಿನ ಅದಾಲತ್ಗಳ ಕುರಿತು ನೆನಪು ಮಾಡಿಕೊಂಡ ನ್ಯಾ. ಅರವಿಂದ್ ಕುಮಾರ್, 2020ರ ಡಿ.19ರಂದು ನಡೆದ ಮೆಗಾ ಇ-ಲೋಕ್ ಅದಾಲತ್ನಲ್ಲಿ 2.63 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ರಾಜ್ಯದ ಬೊಕ್ಕಸಕ್ಕೆ 41.59 ಕೋಟಿ ದಂಡ ಸಂಗ್ರಹಿಸಿ ಕೊಡಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಕುರಿತು ಸ್ವತಃ ಸಿಜೆಐ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.