ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದ ಮುಖ್ಯಮಂತ್ರಿಗಳು, ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ವಿನಯ್ ಕುಲಕರ್ಣಿ, ಮುಸ್ಲಿಂ ಸಮುದಾಯದ ಪಾಲಿನ ಮೀಸಲಾತಿಯನ್ನು ಕಿತ್ತು ಕೊಟ್ಟಿದ್ದನ್ನು ನಾವು ಅವತ್ತೇ ವಿರೋಧಿಸಿದ್ದೆವು ಎಂದರು. ಸಭೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಸಮುದಾಯದ 15 ಮಂದಿ ಶಾಸಕರು ಹಾಗೂ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ಕಾಟಾಚಾರಕ್ಕಾಗಿ ಮೀಸಲಾತಿ ಕೊಡಬಾರದು. ಬಿಜೆಪಿಗೆ ಮೀಸಲಾತಿ ಕೊಡುವುದು ಬೇಕಾಗಿರಲಿಲ್ಲ. ಅದಕ್ಕೆ ನ್ಯಾಯಾಲಯಕ್ಕೆ ಹೋದರೆ ಬಿದ್ದೋಗುವ ರೀತಿಯಲ್ಲಿ ಕಾಟಾಚಾರಕ್ಕೆ ಕೊಟ್ಟರು. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಸಂವಿಧಾನ ತಜ್ಞರ ಜತೆ ಚರ್ಚಿಸಿ ಗೊಂದಲ ಬಗೆಹರಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
2A ಪಟ್ಟಿಗೆ ಸೇರಿಸಲು ಮನವಿ: ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯವನ್ನು ರಾಜ್ಯ 2ಎ ಪಟ್ಟಿಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ಮನವಿ ಮಾಡಿದ್ದೇವೆ. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದಲ್ಲಿ ಅವರೂ ಮುಖ್ಯವಾಹಿನಿಗೆ ಬರಲು ಅನುಕೂಲ ವಾಗುತ್ತದೆ ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಎಲ್ಲ ಸಮುದಾಯದ ಮೀಸಲಾತಿ ಸಂಬಂಧವಾಗಿ ಕಾನೂನು ತೊಡಕುಗಳ ಬಗ್ಗೆ ಸಭೆ ಮಾಡಿ ಕಾನೂನು ನ್ಯಾಯ ಕೊಡಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮೀಸಲಾತಿ ಪ್ರಮಾಣ 75% ಹೆಚ್ಚಳ ಮಾಡೋದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಆ ಬಗ್ಗೆ ಚರ್ಚೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2A ಮೀಸಲಾತಿಗೆ ಹೋರಾಟ ಮಾಡಿದ್ವಿ. ಸರ್ಕಾರ 2D ಅನ್ನೋ ಪ್ರವರ್ಗ ರಚನೆ ಮಾಡಿತ್ತು. ಬಿಜೆಪಿಯವರು ಚುನಾವಣೆ ಕಾರಣಕ್ಕಾಗಿ ಮೀಸಲಾತಿ ನೀಡಿದ್ದರು. ಸರ್ಕಾರ ರಚನೆ ಬಳಿಕ ನಮ್ಮ ನಿಯೋಗ ಭೇಟಿ ಮಾಡಿ ಮೀಸಲಾತಿ ಬಗ್ಗೆ ಮನವಿ ಮಾಡಿದ್ದೇವೆ. ಕೋರ್ಟ್‌ನಲ್ಲಿ ಮೀಸಲಾತಿ ಪ್ರಕರಣವಿರುವುದರಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ವಿ ಎಂದು ಹೇಳಿದರು.
ಕೇಂದ್ರದ ಒಬಿಸಿ ಪಟ್ಟಿಗೂ ಕೂಡ ಸೇರಿಸುವಂತೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನದ ಬಳಿಕ ಮೀಸಲಾತಿ ಸಂಬಂಧವಾಗಿ ತಜ್ಞರ ಸಭೆ ಕರೆಯುವುದಾಗಿ ಸಿಎಂ ತಿಳಿಸಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಜೊತೆಗೆ ಮಾತನಾಡಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಚರ್ಚೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದರು.