ಬೆಂಗಳೂರು: ಬಿಡಿಎ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡಬಾರದು. ಈಗಾಗಲೇ ಇರುವ ನಿವಾಸಿಗಳು, ಭೂ ಮಾಲೀಕರು, ರೈತರನ್ನು ಬೀದಿಗೆ ತರಬಾರದೆಂದು ಒತ್ತಾಯಿಸಿ ಇಂದು ಮೌರ್ಯ ಸರ್ಕಲ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತರು ಮತ್ತು ನಿವಾಸಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಿಡಿಎ ಯೋಜನೆಗಳಿಗೆ ತಲೆ ಬುಡ ಇಲ್ಲ. 2014ರಿಂದ 18ರವರೆಗೆ ಯಾಕೆ ಸುಮ್ಮನಿದ್ದಿದ್ದು. ಬೋಪಣ್ಣ ಸಮಿತಿ ನೋಟಿಫಿಕೇಷನ್ ವಜಾ ಮಾಡಿದ ಮೇಲೆ ನಾಲ್ಕು ವರ್ಷ ಸುಮ್ಮನಿದ್ದು, ನಂತರ ಯೋಜನೆ ಮಾಡ್ತೇವೆ ಅಂತ ಸುಪ್ರೀಂನಲ್ಲಿ ಮನವಿ ಮಾಡಿದ್ರು. ಬಳಿಕ ಯೋಜನೆಗೆ ಒಪ್ಪಿಗೆ ತರೋದು ಬಿಡಿಎಯ ಮೊದಲನೇ ಮೂರ್ಖತನದ ಕೆಲಸ. ಜೊತೆಗೆ ಬಿಡಿಎ ತನ್ನ ಕೆಲಸ ಸರಿಯಾಗಿ ನಿಭಾಯಿಸಬೇಕಿದೆ. ಬಡಾವಣೆಯನ್ನು ರಿಯಲ್ ಎಸ್ಟೇಟ್ ಮಾಡಿ, ದಂಧೆ ಮಾಡಲು ಹೊರಟಿದ್ದಾರೆ. ಬಡ ರೈತರ ಭವಿಷ್ಯಕ್ಕೆ ಒಳ್ಳೆಯದಾಗಲು ಈ ಯೋಜನೆ ಕೈ ಬಿಡಬೇಕಿದೆ ಎಂದು ಒತ್ತಾಯಿಸಿದರು.
ಓದಿ:ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ: ಪ್ರತಿಪಕ್ಷಗಳಿಗೆ ಸಿಎಂ ತಿರುಗೇಟು
ಅಲ್ಲದೆ ಸಿಎಂ ಜೊತೆ ಯೋಜನೆ ಕೈಬಿಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಸಿಎಂ ಜೊತೆ ಸಭೆ ನಡೆಸಿದ ನಿವಾಸಿಗಳು ಹಾಗೂ ರೈತ ಮುಖಂಡರು ಮಾತುಕತೆ ಫಲಪ್ರದವಾಗಿದೆ ಎಂದು ತಿಳಿಸಿದರು. ಸಿಎಂ ಬಿಎಸ್ವೈ ಶಿವರಾಂ ಕಾರಂತ ಬಡಾವಣೆ ಯೋಜನೆಯನ್ನು ಕೈ ಬಿಡಲು ಹೇಳಿದ್ದಾರೆ. ರಾಜ್ಯದ ಅಡ್ವೋಕೇಟ್ ಜನರಲ್ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕ್ತಾರೆ. ಬಿಡಿಎ ಅಧ್ಯಕ್ಷರು ಇದ್ರಲ್ಲಿ ಹಸ್ತಕ್ಷೇಪ ಮಾಡಬಾರದು. ಒಂದು ವೇಳೆ ಹಸ್ತಕ್ಷೇಪ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಸಿಎಂ ಭರವಸೆ ಹಿನ್ನೆಲೆ ಇಂದಿನ ಪ್ರತಿಭಟನೆಯನ್ನು ಕೈಬಿಡಲಾಯಿತು.