ಬೆಂಗಳೂರು: ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಶ್ರೀಗಂಧದ ಮರಗಳ ರಕ್ಷಣೆ, ಕಟಾವು ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಇರುವ ತೊಡಕು ನಿವಾರಿಸುವ ನಿಟ್ಟಿನಲ್ಲಿ ಶ್ರೀಗಂಧ ನೀತಿಗೆ ಬದಲಾವಣೆ ತರಲು ಶೀಘ್ರ ಸಭೆ ಕರೆಯುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಪ್ರತಿನಿಧಿಗಳ ನಿಯೋಗದ ಅಹವಾಲು ಆಲಿಸಿದ ಸಚಿವರು, ಶ್ರೀಗಂಧ ಬೆಳೆಗಾರರ ಸಮಸ್ಯೆ ಪರಿಹರಿಸಲು ಕಾನೂನು ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಂಡ್ಯ ಜಿಲ್ಲೆ ಮಳವಳ್ಳಿಯ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಕಳಪೆ ಗುಣಮಟ್ಟದ ಶ್ರೀಗಂಧದ ಸಸಿ ಬೆಳೆಸಲಾಗಿದ್ದು, ರೈತರು ಖರೀದಿಸಲು ನಿರಾಕರಿಸಿದರೂ ಬಲವಂತವಾಗಿ ಈ ಸಸಿಗಳನ್ನು ನೀಡಲಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು. ಖಾಸಗಿ ಜಮೀನಿನಲ್ಲಿ ಬೆಳೆದ ಶ್ರೀಗಂಧದ ಮರಗಳ ಕಳವು ಪ್ರಕರಣಗಳು ನಡೆದಾಗ ಅರಣ್ಯ ಇಲಾಖೆಯೇ ದೂರು ದಾಖಲಿಸಿಕೊಳ್ಳುವ ಕುರಿತಂತೆ ಸೂಚನೆ ನೀಡುವುದಾಗಿ ಆಶ್ವಾಸನೆ ನೀಡಿದರು. ಬಿದಿರು ಬೆಳೆಗೆ ಪ್ರೋತ್ಸಹ ಧನ ನೀಡುವ ಯೋಜನೆ ಇದ್ದರೂ ಅರಣ್ಯ ಇಲಾಖೆ ಉತ್ತೇಜನ ನೀಡುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿ ಈ ಸಂಬಂಧ ವಿಚಾರಣೆ ನಡೆಸಿ ಪರಿಹಾರ ಒದಗಿಸುವುದಾಗಿ ಹೇಳಿದರು.
ರೈತರಿಗೆ ವಿವಿಧ ಪ್ರಭೇದದ ಸಸಿಗಳನ್ನು ಏಕ ಗವಾಕ್ಷಿ ಯೋಜನೆ ಅಡಿಯಲ್ಲಿ ವಿತರಿಸಬೇಕು ಎಂಬ ನಿಯೋಗದ ಬೇಡಿಕೆಯ ಕುರಿತಂತೆ ತೋಟಗಾರಿಕೆ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಶ್ರೀಗಂಧದ ಬೆಳೆದ ಜಮೀನನ್ನು ಸರ್ಕಾರ ರಸ್ತೆ, ಸೇತುವೆ ಇತ್ಯಾದಿ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಶ್ರೀಗಂಧ ಮರಗಳ ಮೌಲ್ಯೀಕರಣದಲ್ಲೂ ಸಮಸ್ಯೆಗಳಿರುವ ಕುರಿತಂತೆ ರೈತರ ಸಮಸ್ಯೆ ಆಲಿಸಿದ ಸಚಿವರು ಮರು ಮೌಲ್ಯೀಕರಣ ದರ ನಿಗದಿ ಪಡಿಸುವ ಕುರಿತಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ರಾಜೀವ್ ರಂಜನ್, ಅರಣ್ಯ ಸಂಪನ್ಮೂಲ ನಿರ್ವಹಣಾ ವಿಭಾಗದ ಎ.ಪಿ.ಸಿ.ಸಿ.ಎಫ್. ವನಶ್ರೀ ವಿಪಿನ್ ಸಿಂಗ್, ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷ ಅಮರ ನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕನ್ನಡ ಶಿಕ್ಷಕರನ್ನು ನೇಮಿಸುವ ಕೇರಳ ಹೈಕೋರ್ಟ್ ಆದೇಶ ಸಂತಸ ತಂದಿದೆ: ಸಚಿವ ಶಿವರಾಜ ತಂಗಡಗಿ