ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2021ರ ಸಂಬಂಧ ಮಂಗಳವಾರ ಸಭೆ ನಡೆದಿದ್ದು, ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಚರ್ಚೆ ನಡೆಸಲಾಯಿತು.
ಬಿಬಿಎಂಪಿ ಕೇಂದ್ರ ವ್ಯಾಪ್ತಿಯ (154-ರಾಜರಾಜೇಶ್ವರಿನಗರ, 162-ಶಿವಾಜಿನಗರ, 163-ಶಾಂತಿನಗರ, 164-ಗಾಂಧಿನಗರ, 165-ರಾಜಾಜಿನಗರ, 168-ಚಾಮರಾಜಪೇಟೆ ಮತ್ತು 169-ಚಿಕ್ಕಪೇಟೆ) ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ನಡೆದ ಸಭೆಯಲ್ಲಿ, ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ಸಂಬಂಧಪಟ್ಟ ಅಧಿಕಾರಿಗಳು ಮತದಾರರ ಪಟ್ಟಿ ಹೆಚ್ಚಳ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ರೋಲ್ ಅಬ್ಸರ್‌ವರ್ ಜಿ. ಕುಮಾರ್ ನಾಯಕ್ ಸೂಚನೆ ನೀಡಿದರು.
ಮತಗಟ್ಟೆ ಮಟ್ಟದ ಅಧಿಕಾರಿಗಳು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮತಗಟ್ಟೆಗಳ ಪಟ್ಟಿ ಪಡೆದು ಜನಸಂಖ್ಯೆ ಎಷ್ಟಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ತಾಳೆ ಮಾಡಬೇಕು. ಬಳಿಕ ಮತದಾರರ ಪಟ್ಟಿಗೆ ಸೇರ್ಪಡೆಯಾಗದೆ ಇರುವವರನ್ನು ಸೇರಿಸಬೇಕು ಎಂದು ಸೂಚಿಸಿದರು.
ಪ್ರತಿಷ್ಠಿತ ಕಂಪನಿಗಳಿಂದ 6 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ: ಸಚಿವ ಶೆಟ್ಟರ್
ಅಪರ ಜಿಲ್ಲಾ ಚುನಾವಣಾಧಿಕಾರಿ(ಕೇಂದ್ರ) ಹಾಗೂ ವಿಶೇಷ ಆಯುಕ್ತರು(ಆಡಳಿತ) ಜೆ. ಮಂಜುನಾಥ್ ಮಾತನಾಡಿ, ಮತದಾರರ ಪಟ್ಟಿ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4 ಭಾನುವಾರವೂ ಕೂಡ ಮತದಾರರ ನೋಂದಣಿಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಪರಿಷ್ಕರಣೆ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತಿದೆ. ಅಲ್ಲದೆ 01-01-2021ಕ್ಕೆ 18 ವರ್ಷ ತುಂಬಿದ ಯುವಕ/ಯುವತಿಯರು ನಮೂನೆ-6 ಅನ್ನು ಪಡೆದು ಭಾವಚಿತ್ರದೊಂದಿಗೆ ಶಾಲಾ ಟಿ.ಸಿ., ಅಂಕಪಟ್ಟಿ, ಅಧಾರ್ ಕಾರ್ಡ್, ಪಡಿತರ ಚೀಟಿಗಳ ನಕಲು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದಾಗಿದೆ ಎಂದರು.
ಮತದಾರರ ನೋಂದಣಾಧಿಕಾರಿಯೊಬ್ಬರು ಮಾತನಾಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ / ಎನ್ಜಿಒಗಳ ಸಹಯೋಗದೊಂದಿಗೆ ಕೆಲಸ ಮಾಡಲಾಗುತ್ತಿದೆ. ಆಟೋದಲ್ಲಿ ಧ್ವನಿ ವರ್ಧಕಗಳ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕೆಲಸ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಸತಿ ಗೃಹ, ಪಿಜಿ ಗಳಿಗೆ ಭೇಟಿ ನೀಡಿ 18 ವರ್ಷ ತುಂಬಿದವರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಜಿ. ಕುಮಾರ್ ನಾಯಕ್ ಪ್ರತಿಕ್ರಿಯಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಘನತ್ಯಾಜ್ಯ ವಿಲೇವಾರಿ ಆಟೋಗಳಲ್ಲಿನ ಧ್ವನಿವರ್ಧಕಗಳ ಮೂಲಕ ಎಲ್ಲಾ ಕಡೆ ಹೆಚ್ಚು-ಹೆಚ್ಚು ಜಾಗೃತಿ ಮೂಡಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.