ಬೆಂಗಳೂರು : ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಸಮಾರಂಭದಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆಯಾಗಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೋವಿಡ್-19 ನಿಯಂತ್ರಣ ಕುರಿತ ಸಭೆ ನಂತರ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅದ್ದೂರಿ ಕಾರ್ಯಕ್ರಮ ನಡೆಸಿದ ಆರೋಪ ಕೇಳಿ ಬಂದಿದೆ. ವೈರಸ್ಗೆ ಶ್ರೀಮಂತರು, ಬಡವರು ಎನ್ನುವ ವ್ಯತ್ಯಾಸವಿಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೂಡ ಎಚ್ಚರವಹಿಸಬೇಕು. ಎಲ್ಲದಕ್ಕೂ ಮಾರ್ಗಸೂಚಿ ರಚಿಸಲಾಗಿದೆ. ಕಾರ್ಯಕ್ರಮ ಮಾಡಲೂ ನಿಯಮ ಮಾಡಲಾಗಿದೆ. ಯಾರೇ ಆಗಲಿ ಮಾರ್ಗಸೂಚಿ ಪಾಲಿಸಲೇಬೇಕು. ಯಾರೇ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ 80 ಫೀವರ್ ಕ್ಲಿನಿಕ್‌ಗಳು ಕೆಲಸ ಮಾಡುತ್ತಿವೆ. ಎಲ್ಲಾ ಕಡೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಒಂದು ವೇಳೆ ನಮ್ಮ ಫೀವರ್ ಕ್ಲಿನಿಕ್‌ಗಳು ಕೆಲಸ ಮಾಡದಿದ್ರೆ ಲಕ್ಷಾಂತರ ಜನರ ಪರೀಕ್ಷೆ ಹೇಗೆ ಮಾಡಲಾಗುತ್ತಿತ್ತು. ನಾನೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿದ್ದೇನೆ ಎಂದು ಫೀವರ್ ಕ್ಲಿನಿಕ್ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ತಳ್ಳಿ ಹಾಕಿದರು. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಸುಲಿಗೆ ಮಾಡುವ ಬಗ್ಗೆ ಗಮನಕ್ಕೆ ಬಂದಿದೆ.
ಹಾಗಾಗಿ ಚಿಕಿತ್ಸೆಯ ದರ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಇತರ ಕಡೆ ಒಂದೇ ರೀತಿಯ ದರ ನಿಗದಿ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗುತ್ತದೆ. ಖಾಸಗಿ-ಸರ್ಕಾರಿ ವಲಯ ಕೈಜೋಡಿಸಿ ಕೊರೊನಾ ವಿಷಯದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಚಿಕಿತ್ಸೆ, ಪರೀಕ್ಷೆ ಎಲ್ಲದಕ್ಕೂ ಸರ್ಕಾರದಿಂದಲೇ ದರ ನಿಗದಿ ಮಾಡಲಾಗುತ್ತದೆ. ಕೊರೊನಾ ಸ್ಥಿತಿಯಲ್ಲಿ ಯಾರೂ ಕೂಡ ಸುಲಿಗೆ ಮಾಡಬಾರದು.
ಒಂದು ವೇಳೆ ಮಾಡಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕೊರೊನಾ ರೋಗಿಗಳ ಸುಲಿಗೆ ಪ್ರಕರಣ ಸಂಬಂಧ ಈವರೆಗೂ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ. ಯಾವುದೇ ದರ ನಿಗದಿಯನ್ನು ಈವರೆಗೆ ಮಾಡಿಲ್ಲದ ಕಾರಣ ಕ್ರಮದ ಪ್ರಶ್ನೆ ಬರುವುದಿಲ್ಲ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ದರ ನಿಗದಿ ಸಂಬಂಧ ತೀರ್ಮಾನ ಮಾಡಲಾಗುತ್ತದೆ ಎಂದರು.
ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಾಣು ಹರಡುವಿಕೆ ಪ್ರಮಾಣ ಶೇ. 90ರಷ್ಟು ಕಡಿಮೆ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಾಗಾಗಿ ಎಲ್ಲರೂ ಮಾಸ್ಕ್ ಧರಿಸಿ ಎಂದು ಕರೆ ನೀಡಿದರು. ನಮ್ಮ ಮೆಟ್ರೋ ಸಂಚಾರದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಇಂದಿನ ಸಭೆಯಲ್ಲಿಯೂ ಈ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.