ಬೆಂಗಳೂರು: ಕಾಂಗ್ರೆಸ್ ಲಿಂಗಾಯತ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿಗಳ ಸಭೆ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವ ಸಮಿತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆಯನ್ನು ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಮತ್ತು ಎಂ.ಬಿ ಪಾಟೀಲ್ ಆಯೋಜಿಸಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ಅಶೋಕ್ ಪಟ್ಟಣಶೆಟ್ಟಿ ಸೇರಿದಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳು: ಕಳೆದ ಬಾರಿ 48 ಸ್ಥಾನದಿಂದ ಟಿಕೆಟ್ ಪಡೆದಿದ್ದ ಕಾಂಗ್ರೆಸ್ ನಾಯಕರು ಈ ಬಾರಿ 65 ಸ್ಥಾನಗಳಿಗೆ ಬೇಡಿಕೆಯಿಡಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಪ್ರಬಲ ಸಮುದಾಯವಾದ ಲಿಂಗಾಯತರಿಗೆ 65 ಸೀಟುಗಳನ್ನು ನೀಡಬೇಕು. ಈಗಾಗಲೇ ಎಐಸಿಸಿಗೆ ಬೇಡಿಕೆ ಸಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಅವಕಾಶ ಇದೆ. ರಾಜ್ಯದ ದೊಡ್ಡ ಮತದಾರರ ಸಮುದಾಯವಾದ ಲಿಂಗಾಯತರು ಈಗ ಬಿಜೆಪಿ ಕಡೆ ಇದ್ದಾರೆ. ಇವರನ್ನು ಕಾಂಗ್ರೆಸ್ನತ್ತ ಸೆಳೆಯಬೇಕಾದರೆ ನಮ್ಮವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸಮುದಾಯದವರು ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಮತದಾರರಿಗೆ ಈ ಸಾರಿ ಕಾಂಗ್ರೆಸ್ ಬಗ್ಗೆ ಒಲವು ಇದೆ ಎನ್ನುವುದನ್ನು ಪಕ್ಷದ ಹೈಕಮಾಂಡ್ಗೆ ವಿವರಿಸಲು ಕೈ ನಾಯಕರು ನಿರ್ಧರಿಸಿದ್ದಾರೆ.
ವೀರಶೈವ, ಲಿಂಗಾಯತ ಸಮುದಾಯದಲ್ಲಿ 210 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು, ಅದರಲ್ಲಿ ಸುಮಾರು 73 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವ ಆಕಾಂಕ್ಷಿಗಳಿಗೆ ಹೆಚ್ಚು ಒತ್ತು ನೀಡಲು ಚರ್ಚೆಯಾಗಿದೆ. ಎಲ್ಲಾ ಒಳಪಂಗಡಗಳನ್ನು ಸೇರಿಸಿ ಕಾಂಗ್ರೆಸ್ಗೆ ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲಿಂಗಾಯತ, ವೀರಶೈವದ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಹಿರಿಯ ಮುಖಂಡರು ಶೀಘ್ರದಲ್ಲೇ ಪಟ್ಟಿ ತಯಾರಿಸಿ ಹೈಕಮಾಂಡ್ ಮತ್ತು ಉಸ್ತುವಾರಿಗಳ ಗಮನ ಸೆಳೆಯುವ ಕುರಿತು ಚರ್ಚೆಯಾಗಿದೆ. ಎಐಸಿಸಿ ಮಟ್ಟದಲ್ಲೂ ಕೂಡ ಸಮುದಾಯದ ನಾಯಕರಿಗೆ ಉತ್ತಮ ಸ್ಥಾನಮಾನಗಳನ್ನು ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ: ಅಭ್ಯರ್ಥಿಗಳ ಆಯ್ಕೆ ಕಸರತ್ತು.. ಮುಂದುವರಿದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ
ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಸಮುದಾಯದ ದೊಡ್ಡ ಮಟ್ಟದ ನಾಯಕರ ಸಂಪರ್ಕ ಹೊಂದಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಎಂ.ಬಿ ಪಾಟೀಲ್ ಆಗಿದ್ದಾರೆ. ಈಗ ಸಮುದಾಯದ ಎಲ್ಲಾ ನಾಯಕರು ಪ್ರತ್ಯೇಕ ಧರ್ಮ, ತಾರತಮ್ಯ, ಮೀಸಲಾತಿ ಹೋರಾಟ ಮರೆತು ಸಮುದಾಯಕ್ಕಾಗಿ ಒಂದಾಗಿದ್ದಾರೆ. ಪ್ರತ್ಯೇಕ ಧರ್ಮದ ಪರ, ವಿರುದ್ಧವಾಗಿದ್ದವರು ಇಂದು ಒಂದು ವೇದಿಕೆ ಮೇಲೆ ಕುಳಿತು ಸಮಾಲೋಚಿಸಿದ್ದಾರೆ.
ಸಮುದಾಯದಿಂದ ಟಿಕೆಟ್ ಗಿಟ್ಟಿಸುವ ಪ್ರಯತ್ನ: ಒಂದೊಂದೇ ಸಮುದಾಯದವರು ಟಿಕೆಟ್ಗಾಗಿ ಬೇಡಿಕೆ ಮುಂದಿಟ್ಟು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್ನ ಪ್ರಮುಖ ನಾಯಕರುಗಳಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯಲ್ಲಿ ತೊಡಗಿದ್ದಾರೆ. ಟಿಕೆಟ್ ನೀಡಬಹುದಾದ ಅರ್ಹ ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿರುವ ಸ್ಕ್ರೀನಿಂಗ್ ಕಮಿಟಿಯು ಕೂಡ ಬೆಂಗಳೂರಿನಲ್ಲಿಯೇ ಎರಡು ದಿನದಿಂದ ಬೀಡು ಬಿಟ್ಟಿದೆ. ಒಟ್ಟಾರೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ಬಲ ತೋರಿಸಿ ಟಿಕೆಟ್ ಗಿಟ್ಟಿಸುವ ಪ್ರಯತ್ನವನ್ನು ಎಲ್ಲಾ ಸಮುದಾಯದವರು ಮಾಡುತ್ತಿದ್ದಾರೆ.
ಈಗಾಗಲೇ ಒಕ್ಕಲಿಗ ಸಮುದಾಯದವರು ತಮ್ಮ ಬಲ ಪ್ರದರ್ಶನ ಮಾಡಿ ಮುಗಿಸಿದ್ದಾರೆ. ಇದೀಗ ಲಿಂಗಾಯತರ ಪ್ರಯತ್ನವು ನಡೆಯುತ್ತಿದೆ. ಮುಂದೆ ಪರಿಶಿಷ್ಟ ಜಾತಿ, ಪಂಗಡ, ಕುರುಬ ಸಮುದಾಯ, ಅಲ್ಪಸಂಖ್ಯಾತರು ಕೂಡ ಟಿಕೆಟ್ಗಾಗಿ ನಗರದಲ್ಲಿ ತಮ್ಮ ನಾಯಕರ ಜೊತೆ ಸಭೆ ನಡೆಸಿ, ಅವರ ಮೂಲಕ ಪಕ್ಷದ ರಾಜ್ಯ ಮತ್ತು ರಾಷ್ಟ ನಾಯಕರ ಮೇಲೆ ಒತ್ತಡ ಹೇರಲಿದ್ದಾರೆ.
224 ಕ್ಷೇತ್ರಗಳಿಗೆ ಆಕಾಂಕ್ಷಿಗಳಾಗಿ ಈಗಾಗಲೇ 1300ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆ ಬೇರೆ ಪಕ್ಷದಿಂದಲೂ ಹತ್ತಾರು ಜನ ಬಂದು ಕೈ ಹಿಡಿದಿದ್ದಾರೆ. ಚುನಾವಣೆ ವೇಳೆಗೆ ಹಾಲಿ ಶಾಸಕರು ಸೇರಿದಂತೆ ಹಲವರು ಬರುವ ನಿರೀಕ್ಷೆ ಇದೆ. ಇದರೊಂದಿಗೆ ಸಮುದಾಯದ ಒತ್ತಡವೂ ಹೆಚ್ಚಾದರೆ ಕಾಂಗ್ರೆಸ್ ನಾಯಕರಿಗೆ ತಲೆ ಬಿಸಿ ಹೆಚ್ಚಾಗಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಗರದಲ್ಲಿಯೇ ಠಿಕಾಣಿ ಹೂಡಿದ್ದು, ಮುಂಬರುವ ದಿನಗಳಲ್ಲಿ ಎದುರಾಗುವ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾರೆ.
ಇದನ್ನೂ ಓದಿ: ಕೆಲಸವಿಲ್ಲದಿದ್ದರೆ ಕೆಲಸ ಹುಡುಕಿ ಪತಿಯು ಪತ್ನಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್ ಆದೇಶ