ಬೆಂಗಳೂರು: ಕೋವಿಡ್ ಹೊಸ ತಳಿ ಸಂಬಂಧಿಸಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಸೂರು ಡಿಸಿ ಗೌತಂ ಬಗಾದಿ ಬೂಸ್ಟರ್ ಡೋಸ್ ಹಾಕಿಸುವ ಬಗ್ಗೆ ಒತ್ತಿ ಹೇಳಿದರು. ವಿಡಿಯೋ ಸಂವಾದ ವೇಳೆ ಮೈಸೂರು ಡಿಸಿ ಡಾ.ಗೌತಂ ಬಗಾದಿ ಫ್ರಂಟ್ ಲೈನ್ ಸಿಬ್ಬಂದಿಗೆ ಬೂಸ್ಟರ್ ಡೋಸ್ ಹಾಕಿಸುವ ಅಗತ್ಯತೆಯ ಬಗ್ಗೆ ಸಿಎಂರ ಗಮನ ಸೆಳೆದರು.
ಈಗಾಗಲೇ ಫ್ರಂಟ್ ಲೈನ್ ವಾರಿಯರ್ಸ್ ಎರಡನೇ ಡೋಸ್ ಪಡೆದು ವರ್ಷ ಸಮೀಪಿಸುತ್ತಿದ್ದು, ಬೂಸ್ಟರ್ ಲಸಿಕೆ ಹಾಕಿಸುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.
ವಿಡಿಯೋ ಸಂವಾದದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೇಂದ್ರ ಸರ್ಕಾರಕ್ಕೆ ಬೂಸ್ಟರ್ ಡೋಸ್ ಹಾಕಿಸುವ ಬಗ್ಗೆ ಮನವಿ ಸಲ್ಲಿಸಲಾಗುವುದು. ಡಿಸೆಂಬರ್ 1ರ ವರೆಗೆ ಕಾಯುತ್ತೇವೆ. ಒಂದು ವೇಳೆ ಕೇಂದ್ರ ಸರ್ಕಾರ ಘೋಷಣೆ ಮಾಡದೇ ಇದ್ದರೆ, ನಾವು ಬೂಸ್ಟರ್ ಡೋಸ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಐಸಿಎಂಆರ್ ಅನುಮತಿ ನೀಡಿ, ಅಧಿಕಾರಿಗಳು ಮಂಜೂರಾತಿ ನೀಡಿದರೆ ರಾಜ್ಯ ಬೂಸ್ಟರ್ ಡೋಸ್ ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.
ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿಷೇಧಕ್ಕೆ ಸಿಎಸ್ ಆಕ್ಷೇಪ:
ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಲೇಜುಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಹಿನ್ನೆಲೆ ಕಾಲೇಜಿನಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಸಲಹೆ ನೀಡಿದರು. ಇದಕ್ಕೆ ಸಿಎಂ ಬೊಮ್ಮಾಯಿ ಕೂಡ ದನಿಗೂಡಿಸಿದರು. ಆದರೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಲೇಜು ಕಾರ್ಯಕ್ರಮಗಳನ್ನು ತಡೆಯುವುದು ಸಮಂಜಸವಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಮದುವೆ ಸಮಾರಂಭದಲ್ಲಿ ಭಾರಿ ಜನಸೇರುತ್ತಾರೆ. ಅದನ್ನು ನಿಷೇಧಿಸುವುದು ಕಷ್ಟ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು. ಯಾವುದೇ ರೀತಿಯ ಆರ್ಥಿಕ ಚಟುವಟಿಕೆ ಮೇಲೆ ನಿರ್ಬಂಧ ಹೇರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಹಣ ಕ್ಷೀಣಿಸಲಿದೆ. ಇದರಿಂದ ಚೇತರಿಕೆ ಕಾಣುತ್ತಿರುವ ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಮದುವೆ ಸಮಾರಂಭಗಳಲ್ಲಿ ಜನರು ಮಾಸ್ಕ್ ಹಾಕುವುದರತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು ಎನ್ನಲಾಗಿದೆ. ಇದಕ್ಕೆ ಸಚಿವ ಅಶ್ವತ್ಥ್ ನಾರಾಯಣ್ ಕೂಡ ದನಿಗೂಡಿಸಿದರು ಎಂದು ಹೇಳಲಾಗಿದೆ.