ಬೆಂಗಳೂರು: ಮಹಾಲಕ್ಷ್ಮಿ ಬಡಾವಣೆ ಟಿಕೆಟ್ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದ್ದು, ಟಿಕೆಟ್ ಆಕಾಂಕ್ಷಿಗಳು ಪಕ್ಷದ ನಿಲುವಿಗೆ ಬದ್ದ ಎನ್ನುವ ಮೂಲಕ ಅನರ್ಹ ಶಾಸಕ ಗೋಪಾಲಯ್ಯ ಸ್ಪರ್ಧೆಗೆ ಬಹುತೇಕ ಸಮ್ಮತಿ ನೀಡಿದ್ದಾರೆ. ಇದರಿಂದ ಆರಂಭದಲ್ಲೇ ಬಂಡಾಯ ಶಮನವಾದಂತಾಗಿದೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಉಪಚುನಾವಣೆ, ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಪದಾಧಿಕಾರಿಗಳು, ಪ್ರಮುಖರ ಸಭೆ ನಡೆಸಲಾಯಿತು. ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೊದಲು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕುರಿತು ಚರ್ಚೆ ನಡೆಸಲಾಯಿತು. ಸರ್ಕಾರದ ರಚನೆಗೆ ಕಾರಣರಾದವರ ಸ್ಪರ್ಧೆಗೆ ಅವಕಾಶ ನೀಡಿ ಎಂದು ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಸಿಎಂ ಬಿಎಸ್ ವೈ ಸೂಚನೆ ನೀಡಿದರು. ಆಕಾಂಕ್ಷಿಗಳ ಅಭಿಪ್ರಾಯ ಪಡೆದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡುವಂತೆ ರಾಜ್ಯಾಧ್ಯಕ್ಷ ಕಟೀಲ್ ಸೂಚಿಸಿದರು. ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಸಲಹೆ ಹಾಗೂ ಸೂಚನೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾ, ಒಲ್ಲದ ಮನಸ್ಸಿನಿಂದಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಆಕಾಂಕ್ಷಿಗಳು ಪಕ್ಷದ ತೀರ್ಮಾನ ಒಪ್ಪುವ ಭರವಸೆ ನೀಡಿದರು.
ಸಭೆ ಬಳಿಕ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಮಾಜಿ ಕಾರ್ಪೋರೇಟರ್ ನಾಗರಾಜ್ ಮಾತನಾಡಿ, ನಾನು ಟಿಕೆಟ್ ಆಕಾಂಕ್ಷಿ ಆದರೆ ಸಿಎಂ ಹಾಗೂ ರಾಜ್ಯಾಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದರು. ಮಾಜಿ ಶಾಸಕ.ನರೇಂದ್ರಬಾಬು ಮಾತನಾಡಿ, ನಮ್ಮ ಅಭಿಪ್ರಾಯವನ್ನು ನಾಯಕರ ಗಮನಕ್ಕೆ ತಂದಿದ್ದೇವೆ, ಅನರ್ಹ ಶಾಸಕರ ಬಗ್ಗೆ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ತಮ್ಮ ನಿಲುವು ಪ್ರಕಟಿಸುತ್ತೇವೆ. ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆಯುತ್ತೇವೆ. ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ವರಿಷ್ಠರ ಆದೇಶ ಪಾಲಿಸುವುದಾಗಿ ತಿಳಿಸಿದರು.