ಬೆಂಗಳೂರು: ಸ್ನೇಹಿತನೊಂದಿಗೆ ತೆರಳುತ್ತಿದ್ದ ಯುವತಿ ನಿಂದಿಸಿದಲ್ಲದೇ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪದಡಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ವಿದ್ಯಾರ್ಥಿ ವಿರುದ್ಧ 21 ವರ್ಷದ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಏನಿದು ಪ್ರಕರಣ?: ರಷ್ಯಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಆರೋಪಿ, ಎರಡು ತಿಂಗಳ ರಜೆಗಾಗಿ ಭಾರತಕ್ಕೆ ಬಂದವನು, ಬೆಂಗಳೂರಿನ ಗೋವಿಂದ ಪುರದಲ್ಲಿರುವ ಅಕ್ಕನ ಮನೆಗೆ ಬಂದಿದ್ದ. ಆ.24ರಂದು ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಇಂಟರ್‌ವ್ಯೂಗೆ ಹೋಗುತ್ತಿದ್ದ ಯುವತಿಯನ್ನ ಕಾರಿನಲ್ಲಿ ಬಂದ ಆರೋಪಿ ಮತ್ತು ಅವನ ಸ್ನೇಹಿತ ಅಡ್ಡಗಟ್ಟಿದ್ದರು. ಬಳಿಕ ಆಕೆ ಯುವಕನ ಜೊತೆಗೆ ಹೋಗುತ್ತಿದ್ದದ್ದನ್ನು ಪ್ರಶ್ನಿಸಿ, ನಿಂದಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಆ ವಿಡಿಯೋವನ್ನ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದರು.
ಆರೋಪಿಗಳ ಕೃತ್ಯದಿಂದ ನೊಂದ ಯುವತಿ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಸದ್ಯ ಆರೋಪಿತ ವಿದ್ಯಾರ್ಥಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು: 'ಯುವತಿಯೊಬ್ಬರು ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಕಿರುಕುಳಕ್ಕೊಳಗಾಗಿದ್ದಾರೆ. ಬೆಂಗಳೂರು ಪೂರ್ವ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ'- ಪೂರ್ವ ವಿಭಾಗ ಡಿಸಿಪಿ ಡಾ.ಭೀಮಾಶಂಕರ ಎಸ್.ಗುಳೇದ್
ಟ್ವಿಟರ್ನಲ್ಲಿ ಅಳಲು ತೋಡಿಕೊಂಡ ಯುವತಿ: ಇತ್ತೀಚೆಗೆ ಬೆಂಗಳೂರಿನಲ್ಲಿ ರೈಡ್ ಬುಕ್ ಮಾಡಿದ ಯುವತಿಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ನಗರದಲ್ಲಿ ಬೈಕ್ ಬುಕ್ ಮಾಡಿಕೊಂಡು ಬಳಿಕ ತೆರಳುವಾಗ ದಾರಿ ಉದ್ದಕ್ಕೂ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ರೈಡ್ ಮುಗಿದ ಬಳಿಕ ಅಸಂಬದ್ಧವಾಗಿ ಸಂದೇಶ ರವಾನಿಸುವ ಮೂಲಕ ರ‍್ಯಾಪಿಡೋ ಚಾಲಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿರುವ ಯುವತಿ ಟ್ವಿಟರ್ನಲ್ಲಿ ಅಳಲು ತೋಡಿಕೊಂಡಿದ್ದರು
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೌರ್ಯ ಖಂಡಿಸಿ ಕಳೆದ ಜು.22ರಂದು ನಗರದ ಟೌನ್ ಹಾಲ್ ಬಳಿ ನಡೆದಿದ್ದ ಪ್ರತಿಭಟನೆಗೆ ಯುವತಿ ಬಂದಿದ್ದರು. ಬಳಿಕ ಟೌನ್ ಹಾಲ್ನಿಂದ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು ರ‍್ಯಾಪಿಡೋ ಆಟೋ ಬುಕ್ ಮಾಡಿದ್ದರು. ಆದರೆ, ಪದೇ ಪದೆ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಬೈಕ್ ಆಯ್ಕೆ ಆಯ್ದುಕೊಂಡಿದ್ದರು. ಆ್ಯಪ್ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿಯಲ್ಲಿದೆ ಎಂದಿದ್ದ ಚಾಲಕ ಬೇರೆ ಬೈಕಿನಲ್ಲಿ ಬಂದಿದ್ದ. ಬಳಿಕ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈನಲ್ಲಿ ಚಾಲನೆ ಮಾಡುತ್ತ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದರು.
ಇದನ್ನೂ ಓದಿ: ರ‍್ಯಾಪಿಡೋ ಚಾಲಕನಿಂದ ಕಿರುಕುಳ ಆರೋಪ: ಟ್ವಿಟರ್ನಲ್ಲಿ ಅಳಲು ತೋಡಿಕೊಂಡ ಯುವತಿ