ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಆದ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಸಿಎಂ ಯಡಿಯೂರಪ್ಪಗೆ ವಕೀಲ ನಟರಾಜ್ ಶರ್ಮಾ ಮನವಿ ಮಾಡಿದರು.
ವಕೀಲ ನಟರಾಜ್ ಶರ್ಮ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಸೀಟು ಹಂಚಿಕೆಯಲ್ಲಿ ಯಾವ ಶಿಕ್ಷಣ ಸಂಸ್ಥೆ ಎಷ್ಟೆಷ್ಟು ಕೋಟಿ ಹಗರಣ ನಡೆಸಿದೆ ಎಂಬ ದಾಖಲಾತಿಯನ್ನು ಸಹ ನೀಡಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಕೀಲ ನಟರಾಜ್ ಶರ್ಮ, ನಾನೇ ಸಾಕಷ್ಟು ಬಾರಿ ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಅವರ ಭೇಟಿಗೆ ಪ್ರಯತ್ನಿಸಿದ್ದೇನೆ. ಸಾಕಷ್ಟು ಸಲ ಕರೆ ಮಾಡಿದರೂ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ಇವರ ವಾಟ್ಸಾಪ್ ಸಂಖ್ಯೆಗೂ ಮಾಹಿತಿ ಒದಗಿಸಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಗರಣ ನಡೆದಿದೆ. ಅದರ ದಾಖಲೆ ನನ್ನ ಬಳಿ ಇದೆ ಎಂದು ಕೂಡ ತಿಳಿಸಿದ್ದೇನೆ. ಆದರೂ ಸಚಿವರು ಮಾತ್ರ ಇದಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2,013 ಪುಟಗಳ ದಾಖಲೆ ನನ್ನ ಬಳಿ ಇದೆ. ಆದಾಯ ತೆರಿಗೆ ಇಲಾಖೆ ಬಳಿ ಇರುವುದಕ್ಕಿಂತಲೂ ಹೆಚ್ಚಿನ ಮಾಹಿತಿ ಇದೆ. ಅದನ್ನು ನಾನು ಒದಗಿಸಿದ್ದೇನೆ. ಸರ್ಕಾರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ನಡುವೆ ನಡೆದ ಪತ್ರ ವ್ಯವಹಾರದಿಂದ 212 ಮಂದಿಗೆ ಅನ್ಯಾಯವಾಗಿದೆ ಎಂಬ ಕುರಿತ ಮಾಹಿತಿಯನ್ನು ನೀಡಿದ್ದೇನೆ. ಇದರಿಂದಾಗಿ ಸಾಕಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಮಾಹಿತಿಯನ್ನು ಒದಗಿಸಿದ್ದೇನೆ. ಹದಿನಾರಕ್ಕೂ ಹೆಚ್ಚು ಕಾಲೇಜುಗಳಲ್ಲಿ ಈ ಅವ್ಯವಹಾರ ನಡೆದಿದೆ. ಕೇವಲ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಕಾಲೇಜಿನಲ್ಲಿ ಮಾತ್ರ ಅವ್ಯವಹಾರ ನಡೆದಿದೆ ಎಂದು ಹೇಳುತ್ತಿಲ್ಲ. ಬದಲಾಗಿ ಬೆಂಗಳೂರು ನಗರದ ಸಾಕಷ್ಟು ಕಾಲೇಜುಗಳಲ್ಲಿಯೂ ಅವ್ಯವಹಾರ ನಡೆದಿದೆ. ಒಂದು ಸೀಟಿಗೆ 1 ರಿಂದ 1.2 ಕೋಟಿ ರೂಪಾಯಿ ವರೆಗೂ ಡೊನೇಶನ್ ಪಡೆಯಲಾಗಿದೆ ಎಂದು ಆರೋಪಿಸಿದರು.