ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಸೋಂಕಿತರ ಶುಲ್ಕ ಪಾವತಿ ಕುರಿತು ನಿರ್ಧಾರ ಶೀಘ್ರ - ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆ
ಸರ್ಕಾರದ ಕಡೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಖರ್ಚಾಗಿರುವ ಶುಲ್ಕ ನೀಡುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ, ರಾಜರಾಜೇಶ್ವರಿನಗರ ವಲಯ ಕೋವಿಡ್ ನಿಯಂತ್ರಣ ಉಸ್ತುವಾರಿ ಹೊತ್ತಿರುವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಬೆಂಗಳೂರು: ಸರ್ಕಾರದ ಕಡೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಖರ್ಚಾಗಿರುವ ಶುಲ್ಕ ನೀಡುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ, ರಾಜರಾಜೇಶ್ವರಿನಗರ ವಲಯ ಕೋವಿಡ್ ನಿಯಂತ್ರಣ ಉಸ್ತುವಾರಿ ಹೊತ್ತಿರುವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಇಂದು ಕಾರ್ಪೋರೇಟರ್ಗಳು, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಎಸ್.ಟಿ. ಸೋಮಶೇಖರ್, ಹದಿನೈದು ದಿನದಲ್ಲಿ ಸರ್ಕಾರದಿಂದ ಶುಲ್ಕ ಪಾವತಿ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಬೆದರಿಕೆ ಹಾಕಲ್ಲ. ಒಂದು ವೇಳೆ ಯಾವುದೇ ಅಧಿಕಾರಿ ನಿಮಗೆ ಬೆದರಿಕೆ ಹಾಕಿದಲ್ಲಿ, ನನಗೆ ಇಲ್ಲವೇ ಐಎಎಸ್ ಅಧಿಕಾರಿ ವಿಶಾಲ್ ಅವರ ಗಮನಕ್ಕೆ ತನ್ನಿ. ಬೆದರಿಕೆ ಹಾಕುವ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಕೊಟ್ಟರೆ ನಾವು ಕ್ರಮ ಜರುಗಿಸುತ್ತೇವೆ. ಅವರೊಂದಿಗೆ ಮಾತನಾಡಿ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ ಎಂದರು. ಅಲ್ಲದೇ ಬೆಂಗಳೂರಿನ ಎಂಟು ವಲಯದ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ನಾವು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ನಿಂದ ಮೃತಪಟ್ಟ ಪ್ರಕರಣದಲ್ಲೂ ಸಹ ಮೃತದೇಹವನ್ನು ಶೀಘ್ರದಲ್ಲಿ ಹಸ್ತಾಂತರಿಸುವ ಬಗ್ಗೆಯೂ ಕ್ರಮ ವಹಿಸಲಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ಪತ್ರದ ಮೂಲಕ ಮಾಹಿತಿ ಕೊಟ್ಟರೆ ಬಗೆಹರಿಸಲಾಗುವುದು ಎಂದು ತಿಳಿಸಿದರು.