ಬೆಂಗಳೂರು: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಇಂದು ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗೆ ಮುಂದಾಗಿದ್ದು, ಮುಂಜಾಗೃತ ಕ್ರಮವಾಗಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ರ‍್ಯಾಲಿಗೆ ಅವಕಾಶ ಮಾಡಿಕೊಡದೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಆದರೆ ನಿಷೇಧಾಜ್ಞೆ ಲೆಕ್ಕಿಸದೇ ಬೀದಿಗಿಳಿದಿರುವ ಕಾರಣ ಮುಂಜಾಗೃತ ಕ್ರಮವಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮೀ ಅವರನ್ನ ಪಶ್ಚಿಮ ವಿಭಾಗ ಪೊಲೀಸರು ಮನೆಯಲ್ಲಿಯೇ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿಟ್ಟಿದ್ದಾರೆ. ಹೀಗಾಗಿ ರ‍್ಯಾಲಿ ನಡೆಸಲು ತಯಾರಾಗಿದ್ದ ಪ್ಲಾನ್ಅನ್ನು ಸದ್ಯ ಮೊಟಕುಗೊಳಿಸಿದ್ದಾರೆ.
ಮತ್ತೊಂದೆಡೆ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಬಳಿ ಖಾಕಿ ಕಣ್ಗಾವಲಿದ್ದು, ಯಾರಿಗೂ ಪ್ರತಿಭಟನೆಗೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿರುವಂತೆ ಸೂಚನೆ ನೀಡಿದ್ದಾರೆ.
ಆಯುಕ್ತರ ಸೂಚನೆ ಇದ್ದರೂ ಕೂಡ ಇದನ್ನ ಲೆಕ್ಕಿಸದೇ ಫ್ರೀಡಂ ಪಾರ್ಕ್ ಬಳಿ ಸಾವಿರ ಮಂದಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ನಿಷೇಧಾಜ್ಞೆ ನಿಯಮ ಉಲ್ಲಂಘಿಸಿದ ಕಾರಣ ಪಶ್ಚಿಮ ವಿಭಾಗ ಪೊಲೀಸರು ಕಾನೂನು ಕೈಗೊಳ್ಳಲು ಮುಂದಾಗಿದ್ದಾರೆ.