ಬೆಂಗಳೂರು : ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವುದು ಐತಿಹಾಸಿಕ ಸತ್ಯ ಎಂದು ಸಚಿವ ಎಂ ಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವುದು ಐತಿಹಾಸಿಕ ಸತ್ಯ. ಅದು ಎಲ್ಲರಿಗೂ ಗೊತ್ತಿರುವಂತದ್ದೇ. ಅದನ್ನು ಹೇಳುವುದು ತಪ್ಪೇನೂ ಅಲ್ಲ. ಆದರೆ, ಮುಂಚೆ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಪ್ರದೇಶಗಳು ಪುನರ್ ವಿಂಗಡಣೆ ನಂತರ ಸಮಗ್ರ ಕರ್ನಾಟಕದ ಭಾಗವಾಗಿವೆ. ಅಂತಹ ಎಲ್ಲಾ ಪ್ರದೇಶಗಳು ಈಗ ಸಮಗ್ರ ಕರ್ನಾಟಕದಲ್ಲೇ ಇವೆ ಎಂದಿದ್ದಾರೆ.
ಕಾಂತರಾಜ ವರದಿಗೆ ವಿರೋಧವಿಲ್ಲ : ಹಿಂದುಳಿದ ವರ್ಗಗಳ ಸ್ವಾಮೀಜಿಗಳ ತಂಡವೊಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂತರಾಜ ವರದಿ ಸ್ವೀಕರಿಸಲು ಆಗ್ರಹಿಸಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಪ್ರತಿಕ್ರಿಯಿಸಿದ ಸಚಿವ ಎಂ ಬಿ ಪಾಟೀಲ್, ಕಾಂತರಾಜ ವರದಿಗೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಅದನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೇಳಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈಗಿನ ನಿಯಮಗಳ ಪ್ರಕಾರ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರನ್ನು ನಮೂದಿಸಿದರೆ ಸಮುದಾಯದ ಉಪಪಂಗಡಗಳಿಗೆ ಸೇರಿದವರಿಗೆ ಮೀಸಲಾತಿ ಸಿಗುವುದಿಲ್ಲ. ಆದ್ದರಿಂದ, ಸಮುದಾಯಕ್ಕೆ ಸೇರಿದವರು ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡದ ಹೆಸರು ಹಾಕುತ್ತಿಲ್ಲ. ಇದನ್ನು ಸರಿಪಡಿಸಿದರೆ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾದಾಗ, ಸಹಜವಾಗಿಯೇ ಲಿಂಗಾಯತ ಸಮುದಾಯದ ಜನಸಂಖ್ಯೆ ಶೇ. 22ರ ವರೆಗೆ ಹೆಚ್ಚಾಗುವ ಸಂಭವವಿದೆ ಎಂದು ಎಂ ಬಿ ಪಾಟೀಲ್ ವಿವರಿಸಿದರು.
ಸರ್ಕಾರದಲ್ಲಿ ಇನ್ನೂ ಮೂವರು ಡಿಸಿಎಂ ಗಳ ನೇಮಕಾತಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಇದಕ್ಕೆ ಸಂಬಂಧಿಸಿದಂತೆ ನನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಈ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಕೇಳಿದರೆ, ಅದನ್ನು ನಾಯಕರ ಮುಂದೆ ನಾಲ್ಕು ಗೋಡೆಗಳ ಮಧ್ಯೆ ತಿಳಿಸುತ್ತೇನೆ. ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದು ಎಂ ಬಿ ಪಾಟೀಲ್ ಪುನರುಚ್ಚರಿಸಿದರು.
ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಜೆಡಿಎಸ್ ತಯಾರಿ : ದೊಡ್ಡ ಆಲಹಳ್ಳಿಯಲ್ಲಿ ಬೆಳೆದ ಅಕ್ಕಿನಾ? : ಹೆಚ್ಡಿಕೆ