ಬೆಂಗಳೂರು: ಪಂಚಪೀಠದವರೂ ಸೇರಿದಂತೆ ಎಲ್ಲರ ವಿಶ್ವಾಸ ಗಳಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗಾಗಿ ತಮ್ಮ ಹೋರಾಟವನ್ನು ಮತ್ತೆ ನಡೆಸುವುದಾಗಿ ಲಿಂಗಾಯತ ಧರ್ಮ ಚಳವಳಿಯ ರೂವಾರಿ ಹಿರಿಯ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಘೋಷಿಸಿದ್ದಾರೆ.
ಈಟಿವಿ ಭಾರತಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಮತ್ತು ಲಾಕ್ ಡೌನ್ ಸಡಿಲಿಕೆ ನಂತರ ಲಿಂಗಾಯತ ಪ್ರತ್ಯೇಕ ಧರ್ಮದ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗುವುದೆಂದು ತಿಳಿಸಿದ್ದಾರೆ.
ಲಿಂಗಾಯತರನ್ನು "ಶೂದ್ರ" ಗುಂಪಿಗೆ ಸೇರಿಸಲಾಗಿದೆ. ಇದನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಲಿಂಗಾಯತ ಸಮುದಾಯದ ಸ್ವಾಮೀಜಿಗಳೆಲ್ಲರೂ ಸಹ ಶೂದ್ರರೇ ಆಗಿದ್ದಾರೆ. ವಾಸ್ತವ ಹೇಳಿದರೆ ಎಲ್ಲರಿಗೂ ಸಿಟ್ಟುಬರುತ್ತದೆ. ಬಸವ ತತ್ವ ಪಾಲಿಸುವ ನನ್ನ ಸಮುದಾಯ ಶೂದ್ರರ ಗುಂಪಿಗೆ ಸೇರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಧರ್ಮಕ್ಕಾಗಿ ತಮ್ಮ ಹೋರಾಟ ನಡೆಯುತ್ತದೆ ಎಂದು ಖಚಿತಪಡಿಸಿದ್ದಾರೆ.
ಇಂದು ವೀರಶೈವ ಎಂದು ಹೇಳಿಕೊಳ್ಳುವವರೆಲ್ಲ ಹಿಂದೂ ಲಿಂಗಾಯತರೇ ಆಗಿದ್ದಾರೆ, ಇದಕ್ಕೆ ದಾಖಲೆಗಳಿವೆ. ಪ್ರತ್ಯೇಕ ಧರ್ಮ ವಿರೋಧಿಸುವ ರಂಭಾಪುರಿ ಶ್ರೀಗಳು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಸಹ ಹಿಂದೂ ಲಿಂಗಾಯತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಾನು ಬಸವ ಜನ್ಮಭೂಮಿಯಿಂದ ಬಂದವ. ಬಸವ ಧರ್ಮ ಜಾಗತಿಕ ಧರ್ಮ ಆಗಬೇಕು, ಬಸವಣ್ಣನವರ ತತ್ವಗಳು ಜಾಗತಿಕ ಮಟ್ಟದಲ್ಲಿ ಪ್ರಸಾರ ಆಗಬೇಕು. ಬಸವಣ್ಣನವರನ್ನು ನಾವೆಲ್ಲರೂ ಕರ್ನಾಟಕದ ಮಟ್ಟದಲ್ಲಿಯೇ ಕಟ್ಟಿಹಾಕಿಬಿಟ್ಟಿದ್ದೇವೆ. ಜೈನ, ಬೌದ್ಧ, ಇಸ್ಲಾಂ ಧರ್ಮಗಳಂತೆ ಬಸವ ಧರ್ಮ ಸಹ ಜಾಗತಿಕ ಮಟ್ಟದಲ್ಲಿ ಗುರುತಿಸಬೇಕು. ಆ ಮೂಲಕ ಬಸವಣ್ಣನ ತತ್ವಗಳು, ಜಾತಿರಹಿತ ಸಮಾಜದ ಪರಿಕಲ್ಪನೆ ಜಗತ್ತಿಗೆ ತಿಳಿಯಬೇಕು ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರ ಲಿಂಗಾಯತ ಧರ್ಮ ಹೋರಾಟ ಮತ್ತು ಬಸವ ತತ್ವ ಪ್ರಸಾರದ ಕಳಕಳಿಯ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.