ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮೇಯರ್ ಗೌತಮ್ ಕುಮಾರ್ ಜೈನ್ ಆಗಮಿಸಿ ಬಿ.ಎಲ್.ಸಂತೋಷ್ ಭೇಟಿಯಾಗಿದ್ದಾರೆ. ಈ ವೇಳೆ ಮೇಯರ್ ಸ್ಥಾನಕ್ಕೆ ಅವಕಾಶ ನೀಡಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಪಕ್ಷ ತನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಂಡು ಹೊಗುತ್ತೇನೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಐದು ವರ್ಷದ ಆಡಳಿತದಲ್ಲಿ ಇದು ಕಡೆಯ ಅವಧಿಯಾಗಿದ್ದು, ನಂತರ ಚುನಾವಣೆಗೆ ಹೋಗಬೇಕಿದೆ. ಕಳೆದ ಬಾರಿ ಅತಿ ಹೆಚ್ಚು ಸ್ಥಾನ ಪಡೆದರೂ ಅಧಿಕಾರಕ್ಕೆ ಬರುವಲ್ಲಿ ನಾವು ವಿಫಲರಾಗಿದ್ದೆವು. ಹಾಗಾಗಿ ಈ ಬಾರಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕಿದೆ. ಇರುವ ಸಮಯದಲ್ಲಿ ಉತ್ತಮ ಕೆಲಸ ಮಾಡಿ, ಜನರನ್ನು ತಲುಪಿ, ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಎಂದು ನೂತನ ಮೇಯರ್ ಗೆ ಸಂತೋಷ್ ಸಲಹೆ ನೀಡಿದ್ದಾರೆ.