ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂಲೇ ಸಿಎಂ ಯಡಿಯೂರಪ್ಪ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಕ್ಕಲಿಗರ ಸಂಘ ಒಕ್ಕಲಿಗ ಸಮುದಾಯಕ್ಕೆ ಮೇಯರ್ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದ ಬೆನ್ನಲ್ಲೇ ಶಾಸಕರ ನಿಯೋಗ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದೆ.
ರಾಜ್ಯ ಒಕ್ಕಲಿಗರ ಸಂಘದ ನಿಯೋಗ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿತ್ತು. ಒಕ್ಕಲಿಗರ ಸಮುದಾಯದ ಕಾರ್ಪೊರೇಟರ್ ಎಲ್ ಶ್ರೀನಿವಾಸ್, ಮುನಿಂದ್ರ ಕುಮಾರ್ ಇವರಲ್ಲಿ ಯಾರಿಗಾದರೂ ಮೇಯರ್ ಸ್ಥಾನ ನೀಡಬೇಕೆಂದು ಮನವಿ ಮಾಡಿತು.
ವಾರ್ಡ್ ನಂಬರ್ 5 ಜಕ್ಕೂರು ವಾರ್ಡ್ ಕಾರ್ಪೊರೇಟರ್ ಮುನೀಂದ್ರ ಹಾಗೂ ಕುಮಾರಸ್ವಾಮಿ ಲೇಔಟ್ 181 ವಾರ್ಡ್ ಕಾರ್ಪೊರೇಟರ್ ಶ್ರೀನಿವಾಸ್ ಪರ ಸಿಎಂ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಿಎಂ ಈ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಮಾತನಾಡಿ ತೀರ್ಮಾನಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ.
ನಂತರ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್, ಶಾಸಕರಾದ ಸತೀಶ್ ರೆಡ್ಡಿ, ಎಸ್.ರಘು ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ ಬಿಜೆಪಿ ಕಚೇರಿಯಲ್ಲಿ ಎಸ್.ರಘು ನೇತೃತ್ವದ ಸಮಿತಿ ಸಿಎಂಗೆ ಮೇಯರ್ ಅಭ್ಯರ್ಥಿ ಕುರಿತು ವರದಿ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಸಿಎಂ ಭೇಟಿ ಮಾಡಿದ್ದು ಸ್ಥಳೀಯ ಶಾಸಕರನ್ನೂ ಜೊತೆಗೆ ಕರೆದೊಯ್ದು ಮೇಯರ್ ಅಭ್ಯರ್ಥಿ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.