ಬೆಂಗಳೂರು: ನಗರದ ಬಿನ್ನಿಮಿಲ್ ವೃತ್ತದಿಂದ ಮಾಗಡಿ ರಸ್ತೆ ಟೋಲ್ ಗೇಟ್ ಸಿಗ್ನಲ್ವರೆಗಿನ ರಸ್ತೆಗೆ "ಜಿ.ನಾರಾಯಣ ಕುಮಾರ್" ರಸ್ತೆ ಎಂದು ನಾಮಕರಣ ಮಾಡಿ ರಸ್ತೆ ಮಾರ್ಗದಲ್ಲಿ ಅಳವಡಿಸಿರುವ ನಾಮಫಲಕವನ್ನು ಇಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಉಪಮೇಯರ್, ಆಡಳಿತ ಪಕ್ಷದ ನಾಯಕರು ಹಾಗೂ ಪಾಲಿಕೆ ಸದಸ್ಯರು ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು. ಜಿ.ನಾರಾಯಣ ಕುಮಾರ್ ರವರು ಕನ್ನಡ ಪರ ಚಳವಳಿಗಳಲ್ಲಿ ಪಾಲ್ಗೊಂಡು ಅನೇಕ ಹೋರಾಟಗಳನ್ನು ಮಾಡಿರುವ ಧೀಮಂತನಾಯಕರು, ಅಲ್ಲದೆ ಬಡಜನರ ಧ್ವನಿಯಾಗಿ ಕೆಲಸ ಮಾಡಿದ್ದು ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಬಿಎಂಪಿಯಲ್ಲಿ ಮೊದಲು ವಿಜೃಂಭಣೆಯಿಂದ ಆಚರಿಸಿದ ಹಿರಿಮೆ ಅವರರಿಗೆ ಸಲ್ಲುತ್ತದೆ ಎಂದು ಮೇಯರ್ ಹೇಳಿದರು.
ನಾವೆಲ್ಲರೂ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಸಲು ಮುಂದಾಗೋಣ ಅಲ್ಲದೆ ನಾರಾಯಣ ಕುಮಾರ್ ಅವರ ಹೆಸರನ್ನು ಶಾಶ್ವತವಾಗಿರಿಸಲು ಬಿನ್ನಿಮಿಲ್ ವೃತ್ತದಿಂದ ಮಾಗಡಿ ರಸ್ತೆ ಟೋಲ್ ಗೇಟ್ ಸಿಗ್ನಲ್ವರೆಗಿನ ರಸ್ತೆಗೆ ನಾಮಕರಣ ಮಾಡಿರುವುದು ಖುಷಿಯ ವಿಚಾರ ಎಂದು ಹೇಳಿದರು.