ಬೆಂಗಳೂರು : ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಹಣ ವಂಚನೆ ಎಸಗಿದ ಆರೋಪದಡಿ ನಿಶಾ ನರಸಿಂಹಪ್ಪ ಎಂಬುವರನ್ನ ಸದಾಶಿವನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿದ್ಯಾರಣ್ಯಪುರ ನಿವಾಸಿಯಾಗಿರುವ ನಿಶಾ ವಿರುದ್ಧ ನಟ ಆನಂದ್ ಪತ್ನಿ ಯಶಸ್ವಿನಿ ದೂರು ನೀಡಿದ ಮೇರೆಗೆ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ವಿಚಾರಣೆ ವೇಳೆ ವಂಚನೆ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಯನ್ನ ಜೈಲಿಗೆ ಕಳುಹಿಸಲಾಗಿದೆ . ಕಳೆದ ನಾಲ್ಕು ವರ್ಷಗಳಿಂದ ಈವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುತ್ತಿದ್ದ ನಿಶಾ, ಎನ್ಎನ್ ಪ್ರೊಡಕ್ಷನ್ ಕಂಪನಿ ಸಂಸ್ಥಾಪಕಿಯಾಗಿದ್ದರು. ರಿಯಾಲಿಟಿ ಶೋ ವಿಜೇತೆಯಾಗಿದ್ದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ಆ್ಯಕ್ಟಿಂಗ್ ಕ್ಲಾಸ್, ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನೆಲ್ನಲ್ಲಿ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.
ಅಲ್ಲದೇ ಮಕ್ಕಳಿಗೆ ಮಿಸ್ ಇಂಡಿಯಾ, ಮಿಸ್ಟರ್ ಇಂಡಿಯಾ ಮಾಡುವುದಾಗಿ ಯುವ ಜನರಿಂದ ಹಣ ಪಡೆದಿದ್ದಾರೆ. ಈವೆಂಟ್ ಮ್ಯಾನೇಜ್ ಮೆಂಟ್ ಮಾಡುವುದಾಗಿ ಸಾರ್ವಜನಿಕರಿಂದ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಿನ್ನೆ ಯಶಸ್ವಿನಿ ನೀಡಿದ ದೂರಿನ ಮೇರೆಗೆ ನಿಶಾಳನ್ನ ಬಂಧಿಸಲಾಗಿದ್ದು, ಜೊತೆಗೆ ಹಣ ಕಳೆದುಕೊಂಡ 17 ಮಂದಿ ಪೋಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾತನಾಡಿದ್ದ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಆನಂದ್ ಅವರು, ’ನಿಶಾ ಎಂಬವವರು ನನಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಬಳಿಕ ನಮ್ಮ ಮಗಳು ಜನಪ್ರಿಯತೆ ನೋಡಿ ಯಾವುದೋ ಒಂದು ಈವೆಂಟ್ ಮಾಡುತ್ತಿರುವುದಾಗಿ ಹೇಳಿ ನಮ್ಮನ್ನು ಕರೆಸಿದ್ದರು. ನಾವು ತೀರ್ಪುಗಾರರಾಗಿ ಹೋದಾಗ ನಮಗೆ ಪೇಮೆಂಟ್ ಕೂಡ ಮಾಡಿದ್ದರು. ಈ ಸಂದರ್ಭದಲ್ಲಿ 2 ಬಾರಿ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದು, ಇನ್ನುಳಿದ 4 ಬಾರಿ ನಾನೇ ಹೋಗಿದ್ದೇನೆ. ಇದಾದ ನಂತರ ನನಗೆ ಇನ್ಸ್ಟಾಗ್ರಾಂನಲ್ಲಿ ಬ್ಯಾಡ್ ಕಮೆಂಟ್ಸ್ ಬರುವುದಕ್ಕೆ ಶುರು ಆಗಿತ್ತು.
ಹೀಗಾಗಿ ನಿಶಾಳಿಗೆ ಈ ಬಗ್ಗೆ ತಿಳಿಸಿ ಎಲ್ಲ ಸರಿಯಾಗುವವರೆಗೆ ನನ್ನನ್ನು ಕರೆಯಬೇಡ ಎಂದು ಎಚ್ಚರಿಕೆ ಕೊಟ್ಟಿದೆ. ಕೆಲ ದಿನಗಳು ಆದ ಮೇಲೆ ಹಣ ಕೊಟ್ಟು ಪೋಷಕರು ಮೋಸ ಹೋಗುತ್ತಿದ್ದಾರೆ ಎಂದು ಗೊತ್ತಾಯಿತು. ಆದರಿಂದ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದೇನೆ ಎಂದು ಹೇಳಿದ್ದರು.
ಪೋಷಕರ ವಿರುದ್ಧ ಪ್ರತಿ ದೂರು ನೀಡಿದ್ದ ಆರೋಪಿ ಮಹಿಳೆ : ಮತ್ತೊಂದೆಡೆ ಫೋಟೊ ಶೂಟ್ ಆರ್ಡರ್ ಕೊಡೋದಾಗಿ ನಿಶಾ ನರಸಪ್ಪ ಅವರನ್ನು ಕಾಫಿ ಡೇ ಗೆ ಪೋಷಕರು ಕರೆಸಿದ್ದರು. ಆ ಬಳಿಕ ಸದಾಶಿವನಗರ ಪೊಲೀಸರಿಗೆ ನಿಶಾರನ್ನು ಒಪ್ಪಿಸಿದ್ದು, ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಈ ವೇಳೆ ಪೋಷಕರ ವಿರುದ್ಧವೂ ನಿಶಾ ಪ್ರತಿದೂರು ನೀಡಿದ್ದರು. ಕಾಫಿ ಶಾಪ್ನಲ್ಲಿ ಪೋಷಕರು ನನ್ನ ಮೇಲೆ ಗಲಾಟೆ ಮಾಡಿದ್ದಾರೆ. ನಾನು ಯಾರಿಗೂ ಮೋಸ ಮಾಡಿಲ್ಲ. ಹಣ ಕೊಡುವುದು ತಡವಾಗಿದೆ ಎಂದು ಪ್ರತಿದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ : ನಟ ಮಾಸ್ಟರ್ ಆನಂದ್ ಪುತ್ರಿ ಹೆಸರಿನಲ್ಲಿ ಹಣ ದುರ್ಬಳಕೆ ಆರೋಪ: ಪತ್ನಿಯಿಂದ ಪ್ರಕರಣ ದಾಖಲು