ಬೆಂಗಳೂರು: "ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಜನವರಿ 20ರಂದು ಹಾವೇರಿ ಎಸ್ಪಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಹಾವೇರಿಯಲ್ಲಿ ನೈತಿಕ ಪೊಲೀಸ್ಗಿರಿ ಮಾಡಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕುವ ಯತ್ನ ಮಾಡಿದ್ದರು. ಹಾವೇರಿ ಎಸ್ಪಿ, ಗೃಹಸಚಿವರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದರೆ, ಈಗ ಹಾನಗಲ್ ಪೊಲೀಸರನ್ನು ಅವರೇ ಅಮಾನತು ಮಾಡಿದ್ದಾರೆ. ಹೀಗಾಗಿ ಪೊಲೀಸರಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಂತಾಗಿದೆ"
"ಹಾನಗಲ್ ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಆ ಹೆಣ್ಣು ಮಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ಸಿಎಂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ. ಆದರೆ, ಸಿಎಂ ಅವರು ಎಸ್ಐಟಿ ತನಿಖೆಗೆ ನಿರಾಕರಿಸಿರುವುದು ಅಪರಾಧ ಮಾಡುವವರಿಗೆ ಪುಷ್ಟಿ ಕೊಟ್ಟಂತೆ ಆಗಿದೆ. ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದರು.
ಸಿಎಂಗೆ ಮೋದಿ ಫೋಬಿಯಾ: "ಸಿಎಂ ಸಿದ್ದರಾಮಯ್ಯ ಅವರಿಗೆ ಮೋದಿ ಫೋಬಿಯಾ ಇದೆ. ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ಆಡಳಿತ ನೀಡುತ್ತಿದ್ದಾರೆ. ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಎಲ್ಲ ಅಭಿವೃದ್ಧಿ ಕೆಲಸಗಳಿಂದ ಮೋದಿ ಅವರು ಮತ್ತೆ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಹೀಗಾಗಿ ಇವೆಲ್ಲವನ್ನು ಸಹಿಸಿಕೊಳ್ಳಲಾಗದೇ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ." ಎಂದು ಹೇಳಿದರು.
"ಸಿಎಂ ಪುತ್ರ ಯತೀಂದ್ರ ಅವರೇ ಹೇಳಿರುವುದನ್ನು ಕೇಳಿದರೆ, ಕಾಂಗ್ರೆಸ್ ಹೆಚ್ಚು ಸೀಟು ಬಂದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸೀಟು ಬಂದರೆ ಸಿಎಂ ಸ್ಥಾನ ಹೋಗುವ ಆತಂಕ ಅವರಿಗೆ ಕಾಡುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮೋದಿ ಬಂದಾಗೊಮ್ಮೆ ಸುಳ್ಳು ದಾಖಲೆಗಳನ್ನು ನೀಡಿ ಜನರ ದಾರಿ ತಪ್ಪಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಅನುದಾನ ಶೇ 4.7 ರಿಂದ ಶೇ 3.6ಕ್ಕೆ ಇಳಿಯಲು ಸಿದ್ದರಾಮಯ್ಯ ಅವರೇ ಕಾರಣ. ಅವರು ಸರಿಯಾಗಿ ರಾಜ್ಯದ ವಸ್ತು ಸ್ಥಿತಿ ಬಗ್ಗೆ ಮಾಹಿತಿ ನೀಡಿಲ್ಲ. ನಮ್ಮ ಅವಧಿಯಲ್ಲಿಯೂ ಪ್ರವಾಹ ಬಂದಾಗ ಹಿಂದಿನ ಯುಪಿಎ ಸರ್ಕಾರ ಪರಿಹಾರ ನೀಡಿತ್ತಾ? ನಾವು ಕೇಂದ್ರದ ಅನುದಾನಕ್ಕಾಗಿ ಕಾಯದೇ 2,500 ಕೋಟಿ ರೂ. ಪರಿಹಾರ ನೀಡಿದ್ದೆವು. ಕರ್ನಾಟಕದ ಜನರು ನಿಮಗೆ ಮತ ಹಾಕಿದ್ದು, ಒಳ್ಳೆಯ ಆಡಳಿತ ನೀಡಲೆಂದು. ಆದರೆ, ನೀವು ಅವೈಜ್ಞಾನಿಕ ಗ್ಯಾರಂಟಿ ಜಾರಿ ಮಾಡಿ ಆರ್ಥಿಕತೆ ಹಳಿ ತಪ್ಪಿಸುತ್ತಿದ್ದೀರಿ."
"ಗ್ಯಾರಂಟಿ ಯೋಜನೆಗಳ ಜಾರಿಗೆ 30 ಸಾವಿರ ಕೋಟಿ ಖರ್ಚು ಮಾಡಲು ಹೊರಟಿದ್ದೀರಿ. ಆದರೆ, ಅದಕ್ಕೆ ಹಣ ಮೀಸಲಿಟ್ಟಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಅದನ್ನು ಅವರ ಶಾಸಕರೇ ಹೇಳುತ್ತಿದ್ದಾರೆ. ಅವರ ಶಾಸಕರನ್ನು ಸಮಾಧಾನ ಮಾಡಲು ಪ್ರತಿಯೊಬ್ಬರಿಗೂ 25 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ ಶಾಸಕರಿಗೂ 25 ಕೋಟಿ ಕೊಟ್ಟಿದ್ದೆ. ನಮಗೂ 25 ಕೋಟಿ ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಶಾಸಕರಾದವರದು ದೌರ್ಭಾಗ್ಯ" ಎಂದರು.
ಸಿಎಂ ನಮ್ಮ ಐಟಿ ಸೆಲ್ ಹುಡುಗರ ಜೊತೆ ಚರ್ಚಿಸಲಿ: ಕೇಂದ್ರದ ಅನುದಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, "ಸಿಎಂಗೆ ಪ್ರಧಾನಿ ಜೊತೆ ಚರ್ಚೆ ಮಾಡಲು ಆಗಲ್ಲ ಎನ್ನುವುದು ಗೊತ್ತಿದೆ. ಅವರು ಮೊದಲು ನಮ್ಮ ಐಟಿ ಸೆಲ್ ಹುಡುಗರ ಜೊತೆ ಚರ್ಚೆ ಮಾಡಲಿ. ನಮ್ಮ ಐಟಿ ಸೆಲ್ ಹುಡುಗರು ಎಲ್ಲ ಮಾಹಿತಿ ಇಟ್ಟುಕೊಂಡಿದ್ದಾರೆ" ಎಂದು ತಿರುಗೇಟು ನೀಡಿದರು.
ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಮತ್ತೆ ಪ್ರಯತ್ನಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಮ್ಮ ಅವಧಿಯಲ್ಲಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಅದರಲ್ಲಿ ಅವೈಜ್ಞಾನಿಕ ಏನಿದೆ" ಎಂದು ಪ್ರಶ್ನಿಸಿದರು.
ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಯಾರೂ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಯಾರ ಬಗ್ಗೆಯಾದರೂ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಭೂಮಿ ಮೇಲೆ ಇರುವ ಎಲ್ಲರ ಬಗ್ಗೆಯೂ ಏಕವಚನದಲ್ಲಿ ಮಾತನಾಡುತ್ತಾರೆ. ಆದರೆ, ಅವರ ಬಗ್ಗೆ ಬೇರೆಯವರು ಮಾತನಾಡಿದರೆ ಅದು ತಪ್ಪು ಎನ್ನುತ್ತಾರೆ. ಅದೇ ಈಗ ಪ್ರಶ್ನೆಯಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಕುರ್ಚಿ ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ