ಬೆಂಗಳೂರು: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಬಂಧನ ವಿರೋಧಿಸಿ ನಗರದಲ್ಲಿಂದು ಕಮ್ಮವಾರಿ ಯುವ ಬ್ರಿಗೇಡ್, ಕಮ್ಮವಾರಿ ಸಂಘ, ತೆಲಗು ದೇಶಂ ಪಕ್ಷದ ಕಾರ್ಯಕರ್ತರು, ಬೆಂಗಳೂರು ಐಟಿ ವೃತ್ತಿಪರರು, ಟಿಡಿಪಿ ಫೋರಂ, ಕರ್ನಾಟಕದಲ್ಲಿ ನೆಲೆಸಿರುವ ಆಂಧ್ರಪ್ರದೇಶದ ಸುಮಾರು 4 ಸಾವಿರ ಜನ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ದೇಶದ ದೂರದೃಷ್ಟಿಯ ನಾಯಕ, ಜನಪರ ಹೋರಾಟಗಾರ ಎನ್ ಚಂದ್ರಬಾಬು ಅವರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಿದ್ದು, ಕರ್ನಾಟಕದ ಜನತೆಯಾಗಿ ಅವರಿಗೆ ಅಖಂಡ ಬೆಂಬಲ ನೀಡುತ್ತಿದೇವೆ. ಕೂಡಲೇ ಅವರನ್ನು ಬಂಧಮುಕ್ತಗೊಳಿಸಬೇಕು ಎಂದು ಸಹಸ್ರಾರು ಪ್ರತಿಭಟನಾಕಾರರು ಆಗ್ರಹಿಸಿದರು.
ಆಂಧ್ರಪ್ರದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವ ಚಂದ್ರಬಾಬು ನಾಯ್ಡು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆಗೆ ವಿಶೇಷ ಒತ್ತು ನೀಡಿದ್ದಾರೆ. ಅವರ ಬಂಧನ ಅಭಿಮಾನಿಗಳಲ್ಲಿ ದಿಗ್ಭ್ರಮೆ ಮೂಡಿಸಿದ್ದು, ಬಂಧನ ಮುಕ್ತಗೊಳಿಸುವ ತನಕ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ರವಾನಿಸಿದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ಬಂಧಿಸಿದ್ದು, ಇದರಿಂದ ಕರ್ನಾಟಕ, ದೇಶ - ವಿದೇಶಗಳ ಅಭಿಮಾನಿಗಳು ಆತಂಕಗೊಂಡಿದ್ದಾರೆ. ದೇಶಕ್ಕೆ ಅವರ ನಾಯಕತ್ವ ಅಗತ್ಯವಿದೆ. ಅವರ ಬಂಧನ ವಿರೋಧಿಸಿ ಇಲ್ಲಿನ ಸರ್ಕಾರ ಕಠಿಣ ಸಂದೇಶ ರವಾನಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಮ್ಮವಾರಿ ಯುವ ಬ್ರಿಗೇಡ್ನ ಅಧ್ಯಕ್ಷ ಯೋಗೇಶ್, ಖಜಾಂಚಿ ಕೆ. ತೇಜ, ಬ್ರಿಗೇಡ್ ಮುಖ್ಯಸ್ಥರಾದ ರೋಹಿತ್ ನಾಯ್ಡು, ಪ್ರಣೀತ್ ಚೌಧರಿ, ಭರತ್ ಚೌಧರಿ, ಗಣೇಶ್ ಪ್ರಸಾದ್, ಸಂಘದ ಪ್ರಮುಖ ಮುಖಂಡರುಗಳು, ಕಮ್ಮವಾರಿ ಸಂಘದ ಸಮುದಾಯದ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಓದಿ: ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ: ವಿಡಿಯೋ