ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆದ ಮಾಸ್ಕ್ ಡೇ ಜನಜಾಗೃತಿ ನಡಿಗೆಯಲ್ಲಿ ಪೊಲೀಸ್ ಇಲಾಖೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿತ್ತು. ಅಲ್ಲದೇ ವಿಧಾನಸೌಧದಿಂದ ಹಡ್ಸನ್ ವೃತ್ತದವರೆಗೆ ಪಥ ಸಂಚಲನ ನಡೆದಿದ್ದು, ಈ ವೇಳೆ ಸಮವಸ್ತ್ರದ ಜೊತೆಗೆ, ಇಲಾಖೆಯ ಲೋಗೋ ಇರುವ ಮಾಸ್ಕ್ ಅನ್ನು ಸಿಎಂ ಸೇರಿದಂತೆ ಇಲಾಖೆಯ ಪ್ರತಿಯೊಬ್ಬರು ಧರಿಸಿದ್ದರು.
ಈ ವೇಳೆ, ಈಟಿವಿ ಭಾರತ್ ಜೊತೆ ಮಾತನಾಡಿದ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜೂನ್ 18, ರಾಜ್ಯ ಸರ್ಕಾರದ ವತಿಯಿಂದ ಮಾಸ್ಕ್ ಡೇ ಆಚರಿಸಲಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆಯೂ ಉತ್ಸಾಹದಿಂದ ಮಾಸ್ಕ್ ಡೇಯಲ್ಲಿ ಪಾಲ್ಗೊಂಡಿದೆ ಎಂದರು.
ನಂತರ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ನಿತ್ಯ ನೂರಾರು ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಬ್ಬರೂ ಮಾಸ್ಕ್ ಸರಿಯಾಗಿ ಧರಿಸಬೇಕು. ಒಂದು ವೇಳೆ ಧರಿಸದಿದ್ರೆ ಬೇರೆಯವರ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಇದನ್ನು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.
ಇದೀಗ ಮಾಸ್ಕ್ ಯೂನಿಫಾರಂ ಕೂಡಾ ಬಂದು ಬಿಟ್ಟಿದೆ. ಸ್ಯಾನಿಟೈಸರ್ , ಹ್ಯಾಂಡ್ ವಾಶ್, ಗ್ಲೌಸ್, ಫೇಸ್ ಮಾಸ್ಕ್ನ್ನು ಇಲಾಖೆಗೆ ಕಡ್ಡಾಯ ಮಾಡಲಾಗಿದೆ. ನಾವು ಸುರಕ್ಷಿತವಾಗಿದ್ದರೆ, ಜನರನ್ನು ಸುರಕ್ಷಿತವಾಗಿ ನೋಡಿಕೊಳ್ಳಬಹುದಾಗಿದೆ ಎಂದರು.