ಬೆಂಗಳೂರು: ಮೈಸೂರಿನ ನಂಜನಗೂಡು ತಾಲೂಕಿನ ಮರಳೂರು ಗ್ರಾಮದ ಸರ್ವೇ ನಂಬರ್ 222ರಲ್ಲಿನ ಜಮೀನನ್ನು ನ್ಯಾಯಾಲಯದ ಅನುಮತಿಯಿಲ್ಲದೇ ಯಾರಿಗೂ ಹಂಚಿಕೆ ಮಾಡಬಾರದೆಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಮರಳೂರು ಗ್ರಾಪಂ ಸದಸ್ಯ ಶಿವಕುಮಾರ್ ಸೇರಿದಂತೆ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್.ಎಸ್. ಓಕಾ ಮತ್ತು ನ್ಯಾಯಮೂರ್ತಿ ಹೆಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿದೆ.
ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ, ಮೈಸೂರು ಉಪ ವಿಭಾಗಾಧಿಕಾರಿ ಮತ್ತು ನಂಜನಗೂಡು ತಹಶೀಲ್ದಾರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಗೊದ್ದನಪುರ ಗ್ರಾಮದ ನಿವಾಸಿಗಳಿಗೆ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಮರಳೂರು ಗ್ರಾಮದ ಸರ್ವೇ ನಂಬರ್ 222ರಲ್ಲಿನ 17 ಎಕರೆ, 26 ಗುಂಟೆ ಗೋಮಾಳದ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಮರಳೂರು ಗ್ರಾಮಸ್ಥರು ತಮ್ಮ ಜಾನುವಾರುಗಳ ಮೇವಿಗೆ ಈ ಜಮೀನನ್ನೇ ಅವಲಂಬಿಸಿದ್ದಾರೆ. ಗೊದ್ದನಪುರ ಗ್ರಾಮದಲ್ಲೇ ಸಾಕಷ್ಟು ಜಮೀನಿದ್ದು, ಅದನ್ನು ನಿವೇಶನ ಹಂಚಿಕೆಗೆ ಬಳಸಬಹುದು. ಆದ್ದರಿಂದ ಮರಳೂರು ಗ್ರಾಮದ ಗೋಮಾಳ ಜಮೀನನ್ನು ಮೇವಿಗಾಗಿ ಮೀಸಲಿಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿತ್ತು.