ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಬಿಜೆಪಿ ಸಂಸದರ ಸಭೆ ನಡೆಸಿದರು.ಸಭೆಗೆ ಕೇವಲ 11 ಸಂಸದರು ಮಾತ್ರ ಆಗಮಿಸಿದ್ದು, ಕೇವಲ ಅರ್ಧ ಗಂಟೆಯಲ್ಲಿ ಸಭೆಯನ್ನು ಮುಗಿಸಲಾಯಿತು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಶಿವಕುಮಾರ್ ಉದಾಸಿ, ಅಮರೇಶ ನಾಯ್ಕ್, ಸಂಗಣ್ಣ ಕರಡಿ, ದೇವೇಂದ್ರಪ್ಪ, ಪ್ರತಾಪ್ ಸಿಂಹ, ಜಿ ಎಸ್ ಬಸವರಾಜು,ಬಿ ವೈ ರಾಘವೇಂದ್ರ, ಉಮೇಶ್ ಜಾಧವ್, ಪಿ ಸಿ ಗದ್ದಿಗೌಡರ್, ರಾಜ್ಯಸಭೆ ಸದಸ್ಯ ಕೆ ಸಿ ರಾಮಮೂರ್ತಿ, ಡಾ.ಕೆ.ನಾರಾಯಣ ಭಾಗಿಯಾಗಿದ್ದರು.
ದೆಹಲಿಯಲ್ಲಿ ಕೇಂದ್ರ ಸಚಿವರಿದ್ದು ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಭಾಗಿಯಾಗಿದ್ದಾರೆ. ಹಾಗಾಗಿ ಅರ್ಧಕ್ಕೂ ಕಡಿಮೆ ಸಂಸದರು ಮಾತ್ರ ಆಗಮಿಸಿದ್ದರು. ಸಂಸದರೊಂದಿಗೆ ಸಿಎಂ ಯಡಿಯೂರಪ್ಪ ಅನೌಪಚಾರಿಕ ಸಭೆಯನ್ನು ಮಾತ್ರ ಮಾಡಿದರು ಎನ್ನಲಾಗಿದೆ.
ಕೇಂದ್ರ ಬಜೆಟ್ ಪೂರ್ವಭಾವಿ ಸಭೆ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜ್ಯದ ಯೋಜನೆಗಳ ಕುರಿತು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಪೂರಕವಾಗಿ ಸಂಸದರೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. ಆಯಾ ಸಂಸದರೊಂದಿಗೆ ಅವರವರ ಕ್ಷೇತ್ರದ ಬೇಡಿಕೆ ಕುರಿತು ಮಾಹಿತಿ ಸಂಗ್ರಹಿಸಿದರು ಎನ್ನಲಾಗಿದೆ.