ಬೆಂಗಳೂರು: ಇಂದು ನಡೆದ ಸಂಪುಟ ಸಭೆಗೆ ಹಲವು ಸಚಿವರು ಗೈರಾಗಿದ್ದಾರೆ. ಕೆಲವರು ಕೋವಿಡ್ ಕಾರಣದಿಂದ ಗೈರಾಗಿದ್ದರೆ, ಇನ್ನು ಕೆಲವರು ಕೋವಿಡ್ ಇಲ್ಲದಿದ್ದರೂ ಸಂಪುಟ ಸಭೆಗೆ ಹಾಜರಾಗದ ಕಾರಣ ಕೇವಲ ಒಂದು ಗಂಟೆಯಲ್ಲಿ ಸಭೆ ಮುಕ್ತಾಯಗೊಂಡಿದೆ.
ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಕೆ.ಗೋಪಾಲಯ್ಯ, ಪ್ರಭು ಚೌಹ್ವಾಣ್ ಕೊರೊನಾ ಕಾರಣದಿಂದಾಗಿ ಸಂಪುಟ ಸಭೆಗೆ ಗೈರಾಗಿದ್ದರೆ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಆನಂದ್ ಸಿಂಗ್, ಆರ್.ಅಶೋಕ್, ಶ್ರೀಮಂತ ಪಾಟೀಲ್ ಕೋವಿಡ್ ಇಲ್ಲದಿದ್ದರೂ ಸಂಪುಟ ಸಭೆಗೆ ಹಾಜರಾಗುವಲ್ಲಿ ವಿಫಲರಾಗಿದ್ದಾರೆ.
ಹಲವು ಸಚಿವರ ಅನುಪಸ್ಥಿತಿಯಲ್ಲಿ ನಡೆದ ಸಂಪುಟ ಸಭೆ ಕೇವಲ ಒಂದು ಗಂಟೆ ಕಾಲ ನಡೆಯಿತು. ಸಂಪುಟದ ಮುಂದೆ ಚರ್ಚೆಗೆ ಹೆಚ್ಚಿನ ಅಜೆಂಡಾಗಳು ಇಲ್ಲದ ಕಾರಣ ವಿಧೇಯಕಗಳ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.