ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ನಿನ್ನೆ (ಮಂಗಳವಾರ) ಬೆಂಗಳೂರು ಬಂದ್ ಕರೆ ಕೊಟ್ಟಿದ್ದವು. ಬಂದ್ ಎಫೆಕ್ಟ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಪ್ ಆಗಬೇಕಿದ್ದ 13 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.
ಪ್ರಯಾಣಿಕರು ಸಕಾಲಕ್ಕೆ ಏರ್ಪೋರ್ಟ್ ತಲುಪಲಾಗದೇ ಇಂಡಿಗೋ ವಿಮಾನ ಸಂಸ್ಥೆಯ 10 ದೇಶಿ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಇದರ ಜೊತೆಗೆ ಆಕಾಶ್ ಏರ್, ಏರ್ ಏಷ್ಯಾ ಇಂಡಿಯಾ, ಸ್ಟಾರ್ ಏಷ್ಯಾ ವಿಮಾನ ಸಂಸ್ಥೆಗಳ ತಲಾ ಒಂದು ವಿಮಾನ ಹಾರಾಟ ರದ್ದಾಗಿರುವ ಬಗ್ಗೆ ಕೆಐಎಎಲ್ ಮಾಹಿತಿ ನೀಡಿದೆ.
ಬಹುತೇಕ ಪ್ರಯಾಣಿಕರು ಮುಂಜಾನೆಯೇ ಬಂದು ಏರ್ಪೋರ್ಟ್ನಲ್ಲಿ ಕಾದು ನಂತರ, ವಿಮಾನಗಳಲ್ಲಿ ಪ್ರಯಾಣಿಸಿದರು. ಬಿಎಂಟಿಸಿ ವಜ್ರ ಬಸ್ಗಳು, ಓಲಾ ಉಬರ್ ಮತ್ತು ಏರ್ಪೋರ್ಟ್ ಟಾಕ್ಸಿಗಳು ಎಂದಿನಂತೆ ಸಂಚಾರಿಸುತ್ತಿದ್ದವು. ಇದರಿಂದ ಕೆಲವು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ತಲುಪಿ ವಿಮಾನಯಾನ ಮಾಡಿದ್ದಾರೆ.
ಬೆಂಗಳೂರು ಬಂದ್ ಬಹುತೇಕ ಶಾಂತಿಯುತ: ಬೆಂಗಳೂರು ಬಂದ್ ಬಹುತೇಕ ಶಾಂತಿಯುತವಾಗಿತ್ತು. ನಗರದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು, ಖಾಸಗಿ ಕಂಪನಿಗಳು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕಾರ ನೀಡಿದ್ದವು. ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ಕೂಡಾ ಕಡಿಮೆ ಇತ್ತು. ಆಟೋ, ಕ್ಯಾಬ್‌ಗಳು, ಸಾರಿಗೆ ವಾಹನಗಳು ಹಾಗೂ ನಮ್ಮ ಮೆಟ್ರೋ ಸಂಚಾರ ಎಂದಿನಂತಿತ್ತು.
ಟೌನ್‌ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ನ್ಯಾಷನಲ್ ಕಾಲೇಜು, ಮೈಸೂರು ರಸ್ತೆ ಮೈದಾನ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಜೆಡಿಎಸ್ ಕಚೇರಿ ಹತ್ತಿರದಲ್ಲೇ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ನಲ್ಲಿ ಕರೆದೊಯ್ದಿದ್ದರು.
ಹೋಟೆಲ್ ನಡೆದಿದ್ದ ಕಲ್ಲು ತೂರಾಟ: ಜಯನಗರದ ಎರಡ್ಮೂರು ಹೋಟೆಲ್‌ಗಳಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆರೋಪಿಗಳ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇಲ್ಲಿನ ಕೆಲ ಹೋಟೆಲ್‌ಗಳಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಕಿಡಿಗೇಡಿಗಳ ಗುಂಪು ಪೀಠೋಪಕರಣಗಳನ್ನು ಬೀಸಾಡಿ, ಹೋಟೆಲ್ ಗಾಜುಗಳನ್ನು ಒಡೆದು ಹಾಕಿದ್ದರು. ಈ ಕೃತ್ಯ ಹೋಟೆಲ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡ್ತೀವಿ: ಸಿದ್ದರಾಮಯ್ಯ