ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜೈರಾಮ್ ರಮೇಶ್ ಜತೆ ಮನ್ಸೂರ್ ಖಾನ್ ಆಯ್ಕೆಯಾಗಿದ್ದಾರೆ. ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರಿಗೆ ವಿಧಾನಸೌಧದಲ್ಲಿ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು. ಆದರೆ, ಇದಕ್ಕೂ ಮೊದಲು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಷ್ಟೇ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯಸಭೆ ಮಾಜಿ ಸದಸ್ಯ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಎರಡನೇ ಅಭ್ಯರ್ಥಿ ಆಗಿ ಆಯ್ಕೆಯಾದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಹಾಲಿ ರಾಜ್ಯಸಭೆ ಸದಸ್ಯರಾಗಿರುವ ಜೈರಾಮ್ ರಮೇಶ್ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಇದಕ್ಕೂ ಮುನ್ನ ಕೈ ನಾಯಕರು ಮಹತ್ವದ ಚರ್ಚೆ ನಡೆಸಿದರು. ಇದೇ ಸಂದರ್ಭ ಇಬ್ಬರು ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿ ಫಾರಂ ನೀಡಿದ್ದಾರೆ. ಎರಡನೇ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಕಣಕ್ಕಿಳಿಯಲು ತೀರ್ಮಾನಿಸಿರುವ ಕುಪೇಂದ್ರ ರೆಡ್ಡಿ, ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು.
ಆದರೆ, ಈ ಸಂದರ್ಭ ಯಾವುದೇ ಭರವಸೆ ನೀಡದ ಕಾಂಗ್ರೆಸ್ ನಾಯಕರು, ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ. ಕಳೆದ ಸಾರಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ನಾವು ಬೆಂಬಲ ನೀಡಿದ್ದೇವೆ. ಈ ಸಾರಿ ಅವರು ನಮ್ಮನ್ನು ಬೆಂಬಲಿಸಲಿ. ಅಲ್ಪಸಂಖ್ಯಾತರ ಮೇಲೆ ಅವರಿಗಿರುವ ಒಲವು ವ್ಯಕ್ತವಾಗಲಿ ಎಂಬುದನ್ನು ಹೇಳುವ ಸಲುವಾಗಿಯೇ ಕಾಂಗ್ರೆಸ್ ಈ ತಂತ್ರಗಾರಿಕೆ ರೂಪಿಸಿದೆ ಎನ್ನಲಾಗುತ್ತಿದೆ.
ಇದೀಗ ಕಾಂಗ್ರೆಸ್ ತನ್ನ ಸದಸ್ಯ ಬಲದಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಿದೆ. ಹೆಚ್ಚುವರಿಯಾಗಿ 25 ಸದಸ್ಯರ ಬಲ ಹೊಂದಲಿದೆ. ಜೆಡಿಎಸ್ 32 ಸದಸ್ಯರನ್ನು ಹೊಂದಿದೆ. ಕೊರತೆ ಬೀಳುವ ಸಂಖ್ಯೆಗೆ ಬಿಜೆಪಿಯಲ್ಲಿ ಹೆಚ್ಚುವರಿ ಉಳಿಯುವ 15 ಸದಸ್ಯರ ಬೆಂಬಲ ಕೋರುವ ಸಾಧ್ಯತೆ ಇದೆ. ಇದರಿಂದ ಮನ್ಸೂರ್ ಖಾನ್‌ಗೆ ಬೆಂಬಲಿಸುವ ಬದಲು, ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಜೆಡಿಎಸ್ ಯತ್ನಿಸಲಿದೆ.
ಒಟ್ಟಾರೆ ಐವರು ಕಣಕ್ಕಿಳಿಯುವ ಸಾಧ್ಯತೆ ಇದ್ದು, ಚುನಾವಣೆ ಅನಿವಾರ್ಯವಾಗಲಿದೆ. ಅಡ್ಡ ಮತದಾನ ಕೂಡ ಯಾವುದೇ ಪಕ್ಷದಲ್ಲಿ ಆಗುವ ಸಾಧ್ಯತೆ ಇದೆ. ಎಲ್ಲಾ ಪಕ್ಷಗಳೂ ಸದಸ್ಯರ ಮನವೊಲಿಕೆ ಮಾಡುವ ಸ್ಥಿತಿ ಬರಲಿದೆ.
ಓದಿ : ಮಂಗಳೂರು ವಿವಿ ಹಿಜಾಬ್ ವಿವಾದ: ಕಾಲೇಜ್ಗೆ ಬಂದ 12 ವಿದ್ಯಾರ್ಥಿನಿಯರು, ಡಿಸಿ ನಿರ್ಧಾರದ ನಿರೀಕ್ಷೆ