ಬೆಂಗಳೂರು: ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಗೃಹ ಸಚಿವರಿಂದ ಸದನಕ್ಕೆ ಉತ್ತರ ಕೊಡಿಸಲಾಗುತ್ತದೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದ ಮೂರನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಗೋಲಿಬಾರ್ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಮಂಗಳೂರು ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಿಸಿ ನಂತರ ಸಿಎಂ ವಾಪಸ್ ಪಡೆದರು. ಅದು ಬಡ ಕುಟುಂಬ, ದುಡಿಯುವ ಯಜಮಾನನೇ ಇಲ್ಲದಂತಾಗಿದೆ, ಆ ಕುಟುಂಬ ರಸ್ತೆಗೆ ಬಂದಿದೆ. ಹಾಗಾಗಿ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಿಲುವಳಿ ಸೂಚನೆಗೆ ಗೃಹ ಸಚಿವರು ಉತ್ತರ ನೀಡಲಿದ್ದಾರೆ. ಅವರಿಂದಲೇ ಉತ್ತರ ಹೇಳಿಸಲಿದ್ದೇವೆ ಎಂದು ಭರವಸೆ ನೀಡಿದಾಗ ಐವಾಜ್ ಡಿಸೋಜಾ ಧರಣಿ ವಾಪಸ್ ಪಡೆದರು.