ಬೆಂಗಳೂರು: ಮಂಗಳೂರು ಗೋಲಿಬಾರ್ಗೆ ಕಾರಣ ಏನು? ಗೋಲಿಬಾರ್ ಮುನ್ನ ಹಾಗೂ ನಂತರ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕ್ರಮದ ಕುರಿತು ವಿವರಣೆ ನೀಡಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಒತ್ತಾಯಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿಚಾರವಾಗಿ ಪ್ರತಿಪಕ್ಷದ ನಿಲುವಳಿ ಸೂಚನೆ ಅಡಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಮಾತನಾಡಿ, ನಿಷೇಧಾಜ್ಞೆಯಿಂದ ಯಾವುದೇ ಪರಿಹಾರ ಅಸಾಧ್ಯ. ಸಿಐಎ, ಎನ್ಆರ್ಸಿಯಂತಹ ಸೂಕ್ಷ್ಮ ವಿಚಾರದಲ್ಲಿ ಗೋಲಿಬಾರ್ ಮಾಡಬಾರದಾಗಿತ್ತು. ಲಾಠಿ ಚಾರ್ಜ್ನಿಂದಾಗಿ ಅಮಾಯಕರು, ತರಕಾರಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆ ಆಗಿದೆ ಎಂದು ಮಂಗಳೂರಿನ ಗೋಲಿಬಾರ್ ಘಟನೆಯನ್ನು ಸವಿವರವಾಗಿ ವಿವರಿಸಿದರು.
ಇಬ್ಬರು ಅಮಾಯಕರ ಸಾವಾಗಿದೆ. ಇವರು ಶ್ರಮಿಕರಾಗಿದ್ದರು. ಗಲಾಟೆ ನಡೆಯುತ್ತಿತ್ತು, ಕುತೂಹಲಕ್ಕೆ ಆತ ಆಚೆ ಹೋಗಿದ್ದ. ಅಬ್ದುಲ್ ಜಲೀಲ್ ಪತ್ನಿ ಕಣ್ಣೆದುರೇ ಮನೆಯಿಂದ 20 ಅಡಿ ದೂರದಲ್ಲಿ ಸತ್ತಿದ್ದ. ಇನ್ನು ಗೌಸಿನ್ ಸಾವು ಕೂಡ ಅಕ್ಷಮ್ಯ ಎಂದರು. ಆಸ್ಪತ್ರೆ ಐಸಿಯುಗೆ ಬೂಟ್ ಕಾಲಿನಲ್ಲಿ ಪೊಲೀಸರು ತೆರಳಿದರು. ಆಸ್ಪತ್ರೆ ಆವರಣದಲ್ಲಿ ಅಶ್ರುವಾಯು ಸಿಡಿಸಿದ್ದಾರೆ. ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿತ್ತು, ಕರ್ಫ್ಯು ವಿಧಿಸಲಾಗಿತ್ತು. ಪೊಲೀಸರ ದೌರ್ಜನ್ಯ ಎದ್ದು ಕಂಡಿದೆ. ಜೀವದ ಬಗ್ಗೆ ಹೊಣೆಗೇಡಿಗಳಾಗಿ ಪೊಲೀಸರು ನಡೆದುಕೊಂಡಿದ್ದು ವೀಡಿಯೋಗಳಲ್ಲಿ ಕಾಣಸಿಕ್ಕಿದೆ. ಇದೆಲ್ಲಾ ನೋಡಿದರೆ ಗೋಲಿಬಾರ್ ಪೂರ್ವ ನಿಯೋಜಿತ ಎನಿಸುತ್ತದೆ ಎಂದರು.
ಪೊಲೀಸ್ ಆಯುಕ್ತರು ಹಲವು ತಪ್ಪು ಹೆಜ್ಜೆ ಇಟ್ಟಿದ್ದಾರೆ. 5-6 ಸಾವಿರ ಮಂದಿ ಭಾಗವಹಿಸಿದ್ದಾರೆ ಎಂದಿದ್ದಾರೆ. ಆದರೆ ಎಫ್ಐಆರ್ನಲ್ಲಿ 2 ಸಾವಿರ ಮಂದಿ ಅಂತಿದೆ. ಪೊಲೀಸರು, ಅಮಾಯಕರು ಗಾಯಗೊಂಡಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಒಂದೊಂದು ವರದಿ ಒಂದೊಂದು ರೀತಿ ಇದೆ. ಅದು ಅನುಮಾನ ತರಿಸುತ್ತಿದೆ. ಸತ್ತವರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ಪ್ರಭಾವಿಗಳು ಇಲ್ಲಿ ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ. ಪೊಲೀಸರು ಸಿಡಿಸಿದ 8ರಲ್ಲಿ 7 ಗುಂಡು ಸೊಂಟದ ಮೇಲ್ಭಾಗಕ್ಕೆ ತಗುಲಿದೆ. ಕಾಲಿಗೆ ಗುಂಡು ಹೊಡೆಯಬೇಕಿತ್ತು. ಅಲ್ಲದೆ ಗೊಲೀಬಾರ್ ಮಾಡುವಾಗ ಕೆಲ ನಿಯಮಗಳಿವೆ. ಅದರ ಪಾಲನೆ ಆಗುತ್ತಿಲ್ಲ ಎನ್ನುತ್ತಿದ್ದಂತೆ ಮಧ್ಯಪ್ರವೇಶ ಮಾಡಿ ಮಾತಿಗೆ ಮುಂದಾದ ಲೆಹರ್ ಸಿಂಗ್ ಬಗ್ಗೆ ಪಾಟೀಲರು ಆಕ್ರೋಶ ಹೊರಹಾಕಿ, ಅವರಿಗೆ ಮಾತಿಗೆ ಅವಕಾಶ ಬೇಡ. ಅವರು ಕನ್ನಡವನ್ನು ಕೊಂದಿದ್ದಾರೆ ಎಂದರು.
ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಗೃಹ ಸಚಿವರಿಗೆ ಸಲಹೆ ನೀಡಿದ ಪಾಟೀಲರ ಮಾತು ಕೇಳಲು ಆ ಸಂದರ್ಭ ಬೊಮ್ಮಾಯಿ ಸ್ಥಳದಲ್ಲಿ ಇರಲಿಲ್ಲ. ಸಚಿವ ಸುರೇಶ್ ಕುಮಾರ್ ತಮ್ಮ ಆಸನ ಬಿಟ್ಟು ಸದಸ್ಯರ ಆಸಮದಲ್ಲಿ ಕುಳಿತು ಚರ್ಚೆ ವೀಕ್ಷಿಸಿದರು. ಶಾಂತ ರೀತಿಯ ಪ್ರತಿಭಟನೆಗೆ ಇಂತಹ ತಿರುವು ಅಗತ್ಯವಿರಲಿಲ್ಲ. ಪರಿಸ್ಥಿತಿ ಕೈಮೀರಿ ಹೋದ ಮೇಲೆ ಬೇಜವಾಬ್ದಾರಿಯಿಂದ ಗೋಲಿಬಾರ್ ಮಾಡಲಾಗಿದೆ ಎಂದರು.
ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮಜಾಯಿಷಿ ನೀಡುವ ಯತ್ನ ಮಾಡಿದರು. ಪಾಟೀಲರು ಅವಕಾಶ ಕೊಡದೇ ಮಾತು ಮುಂದುವರಿಸಿದರು. ಪೊಲೀಸ್ ರೂಲ್ಸ್ ಅರಿಯುವ ಅಗತ್ಯ ನಮಗಿಲ್ಲ. ಏನು ಮಾಡಬೇಕೆಂದು ವಿವರಿಸಿ ಅಂತ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದಾಗ, ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎಸ್.ಆರ್. ಪಾಟೀಲ್ ಬಾಕಿ ಉಳಿದ ಪುಟಗಳ ವಿವರ ಓದುವುದನ್ನು ಮುಂದುವರಿಸಿದ್ದರು.
ಗೃಹ ಸಚಿವರ ಪ್ರತಿಕ್ರಿಯೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಉತ್ತರ ಕೊಡಲು ಸಮರ್ಥವಾಗಿದೆ. ಸಮರ್ಪಕವಾಗಿಯೇ ಕ್ರಿಯೆ ನಡೆದಿದೆ. ಇದರಿಂದಾಗಿ ಘಟನೆಗೆ ತದ್ವಿರುದ್ಧವಾಗಿ ನಿಲುವು ಕೈಗೊಳ್ಳಬಾರದು. ಆಸ್ತಿಪಾಸ್ತಿ ಹಾನಿ ಮಾಡುವವರಿಗೆ ಎಂತಹ ಕ್ರಮ ಕೈಗೊಳ್ಳಬೇಕೆಂದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ನಾವು ಕಾನೂನು ಉಲ್ಲಂಘನೆ ಮಾಡಿದ್ದರೆ ತಿಳಿಸಿ, ಉತ್ತರ ಕೊಡುತ್ತೇವೆ. ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದರು.
ಸಚಿವ ಸುರೇಶ್ ಕುಮಾರ್ ಮಾತನಾಡಿ, ದೂರದಲ್ಲಿದ್ದು ಮಾತನಾಡುವುದು ಸುಲಭ. ಸ್ಥಳದಲ್ಲಿದ್ದವರ ಪರಿಸ್ಥಿತಿ ಅರಿಯುವುದು ಕಷ್ಟ. ಪೊಲೀಸರ ನೈತಿಕ ಶಕ್ತಿ ಕುಸಿಯದಂತೆ ನೋಡಿಕೊಳ್ಳಿ. ಅಲ್ಲದೇ ಅಂದು ಅಲ್ಲಿ ಗೋಲಿಬಾರ್ ಇನ್ನು ಕೆಲ ಕ್ಷಣ ವಿಳಂಬವಾಗಿದ್ದರೆ ಊಹಿಸಲಾಗದ ಅನಾಹುತ ಆಗುತ್ತಿತ್ತು. ಪೊಲೀಸರು ಸಕಾಲಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದರು. ಸದನ ನಿಯಂತ್ರಿಸುವುದು ಉಪ ಸಭಾಪತಿಗಳಿಗೆ ಸವಾಲಾಯಿತು. ಗೃಹ ಸಚಿವರು ಮಾತು ಮುಂದುವರಿಸಿ, ಇಲ್ಲಿ ದೀರ್ಘ ಚರ್ಚೆ ಮಾಡೋಣ. ಮುಚ್ಚುಮರೆ ಇಲ್ಲ. ಸಂಪೂರ್ಣವಾಗಿ ಚರ್ಚೆ ಮಾಡೋಣ. ಅನಗತ್ಯ ಗೊಂದಲ ಬೇಡ. ತನಿಖೆ ಮಾಡುತ್ತೇವೆ. ಯಾರು ಅಮಾಯಕರು, ಅಮಾಯಕರಲ್ಲ ಎನ್ನುವುದು ಗೊತ್ತಾಗಲಿದೆ ಎಂದರು.