ಬೆಂಗಳೂರು: ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ನಾಳೆಯಿಂದಲೇ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ತುರ್ತು ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅನಿವಾರ್ಯತೆಯಿದೆ. ಕಡ್ಡಾಯ ವರ್ಗಾವಣೆ ಪದ ಅನ್ನೋದೇ ಸರಿಯಿಲ್ಲ. ಈ ಕಡ್ಡಾಯ ವರ್ಗಾವಣೆ ಅನ್ನೋದು ಒಂದು ರೀತಿ ಶಿಕ್ಷೆ ಇದ್ದಂತೆ. ಕಾಯ್ದೆಗೆ ಅಗತ್ಯವಾದ ತಿದ್ದುಪಡಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಡ್ಡಾಯ ವರ್ಗಾವಣೆ ಕಾಯ್ದೆಗೆ ತಿದ್ದುಪಡಿಯನ್ನು ಆದಷ್ಟು ಬೇಗ ತರುತ್ತೇವೆ. ಕಾಯಿಲೆಯಿಂದ ನರಳುತ್ತಿರುವವರು, ಬೇರೆ ಬೇರೆ ಸಮಸ್ಯೆ ಇರೋರು ಕೂಡ ಇದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದರು.
ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ: ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯ ವರ್ಗಾವಣೆಗೆ 12,622 ಶಿಕ್ಷಕರನ್ನ ಗುರುತಿಸಲಾಗಿದೆ. ಇದರಲ್ಲಿ 6832 ಜನ ವಿವಿಧ ಕಾರಣಕ್ಕೆ ವಿನಾಯಿತಿ ಪಡೆದಿದ್ದಾರೆ. 5790 ಶಿಕ್ಷಕರು ವರ್ಗಾವಣೆಗೆ ಅರ್ಹರಾಗಿದ್ದಾರೆ. ಆದರೆ ಶೇ. 4 ರಷ್ಟು ಮಾತ್ರ ವರ್ಗಾವಣೆ ಆಗಲಿದ್ದು, ಆ ಪ್ರಕಾರ 4084 ಅರ್ಹರಾಗಿದ್ದಾರೆ.
ಪ್ರೌಢಶಾಲಾ ಮಟ್ಟದಲ್ಲಿ: ಇನ್ನು ಪ್ರೌಢಶಾಲಾ ಮಟ್ಟದಲ್ಲಿ ಒಟ್ಟು ಕಡ್ಡಾಯ ವರ್ಗಾವಣೆಗೆ 3692 ಶಿಕ್ಷರನ್ನು ಗುರುತಿಸಲಾಗಿದೆ. ಅದರಲ್ಲಿ 2100 ಜನ ವಿವಿಧ ಕಾರಣಕ್ಕೆ ವಿನಾಯಿತಿ ಪಡೆದಿದ್ದಾರೆ. 1592 ಜನ ವರ್ಗಾವಣೆಗೆ ಅರ್ಹರಾಗಿದ್ದು, ಅವರಲ್ಲಿ, 1234 ಜನ 4% ನಿಯಮದ ಅಡಿ ವರ್ಗಾವಣೆ ಆಗಬೇಕು. ವರ್ಗಾವಣೆಗೆ ಅರ್ಹವಾಗಿರುವ B ಮತ್ತು C ಝೋನ್ ನಲ್ಲಿ ಯಾವುದೇ ಪೋಸ್ಟ್ ಖಾಲಿ ಇಲ್ಲ. ಹೀಗಾಗಿ ಕಡ್ಡಾಯ ವರ್ಗಾವಣೆ ನಮಗೆ ಕಷ್ಟವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕಡ್ಡಾಯ ವರ್ಗಾವಣೆ ಆಗೋರಿಗೆ ಕೆಲವು ಆಫರ್ ನೀಡಲಾಗಿದೆ. ಕೌನ್ಸಿಲಿಂಗ್ನಲ್ಲಿ ಶಿಕ್ಷಕರು ಅವರಿಗೆ ಸೂಕ್ತವೆನಿಸುವ ಹತ್ತಿರದ ಜಾಗವನ್ನ ಅವರು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಜಾಗ ಸಿಗದೇ ಇದ್ದರೆ ಪಕ್ಕದ ತಾಲೂಕು, ಅಥವಾ ಹತ್ತಿರದ ಜಿಲ್ಲೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಮುಂದಿನ ವರ್ಷದಿಂದ ವರ್ಗಾವಣೆಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುತ್ತೆ. ಕಾಯ್ದೆ ತಿದ್ದುಪಡಿಗೆ ಇನ್ನೊಂದು ವರ್ಷದಲ್ಲಿ ತಿದ್ದುಪಡಿ ತಂದು ಜಾರಿಗೆ ತರುತ್ತೇವೆ. ಶಿಕ್ಷಕ ಸ್ನೇಹಿ ವರ್ಗಾವಣೆ ಜಾರಿಗೆ ತರಲು ನಾನು ಕೆಲಸ ಮಾಡುತ್ತೇನೆ. ಕಡ್ಡಾಯ ವರ್ಗಾವಣೆ, ಪರಸ್ಪರ ವರ್ಗಾವಣೆಯನ್ನು ಈ ತಿಂಗಳ ಕೊನೆವರೆಗೆ ಮುಕ್ತಾಯ ಮಾಡ್ತೀವಿ ಎಂದರು.
ಅಕ್ಟೋಬರ್ ಕೊನೆಯಲ್ಲಿ 10ಸಾವಿರ ಶಿಕ್ಷಕರ ನೇಮಕ: ಪ್ರಾಥಮಿಕ ಶಿಕ್ಷಣಕ್ಕೆ 10 ಸಾವಿರ ಶಿಕ್ಷಕರ ನೇಮಕ್ಕೆ ಎಲ್ಲಾ ಸಿದ್ಧತೆ ಆಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಅಕ್ಟೋಬರ್ ಕೊನೆಯಲ್ಲಿ ಎಲ್ಲರಿಗೂ ನೇಮಕಾತಿ ಪತ್ರ ನೀಡುತ್ತೇವೆ. ಜೊತೆಗೆ ಮುಂದಿನ ವರ್ಷ ಶಾಲೆಯ ಮೊದಲ ದಿನವೇ ಪುಸ್ತಕ, ಸಮವಸ್ತ್ರ ಕೊಡುವ ಬಗ್ಗೆ ಕೆಲಸ ಮಾಡ್ತೀವಿ. ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಯಾವುದೇ ಚರ್ಚೆ ಇದುವರೆಗೆ ಆಗಿಲ್ಲ.
ಕಡ್ಡಾಯ ವರ್ಗಾವಣೆ ಬಗ್ಗೆ ಅನೇಕ ಗೊಂದಲಗಳು ಇತ್ತು. ಅನೇಕ ಜನ ಕಡ್ಡಾಯ ವರ್ಗಾವಣೆ ಬಗ್ಗೆ ನನ್ನ ಬಳಿ ದೂರು ನೀಡಿದರು. ಹಾಗಾಗಿ ನಾನು ವರ್ಗಾವಣೆ ನಿಲ್ಲಿಸಿದ್ದೆ. ಈ ಸುದ್ದಿಗೋಷ್ಟಿಯನ್ನ ಸಂತೋಷದಿಂದ ಮಾಡುತ್ತಿಲ್ಲ. ಎರಡು ಗುಂಪುಗಳ ಮಧ್ಯೆ ಸಿಲುಕಿ ಹಾಕಿಕೊಂಡಿದ್ದೇನೆ. ಕಡ್ಡಾಯ ವರ್ಗಾವಣೆ ಮಾಡಬೇಕು ಅಂತ ಕೆಲವರು ಹೇಳ್ತಾರೆ, ಮತ್ತೆ ಕೆಲವರು ಬೇಡ ಅಂತ ಹೇಳ್ತಿದ್ದಾರೆ. ನೀವು ವರ್ಗಾವಣೆ ಮಾಡಿಲ್ಲ ಅಂದರೆ, ಒಂದು ವೇಳೆ ಮಾಡಿದ್ರೆ ವಿಷ ತಗೋತೀನಿ ಅಂತ ಹೇಳ್ತಿದ್ದಾರೆ.
ಈ ವರ್ಗಾವಣೆ ಬಗ್ಗೆ 20 ಗಂಟೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. 2017 ರಲ್ಲಿ ಬಂದ ಈ ವರ್ಗಾವಣೆ ಕಾಯ್ದೆ ಯಾವುದೇ ಚರ್ಚೆ ಇಲ್ಲದೆ ಅಧಿವೇಶನದಲ್ಲಿ ಪಾಸ್ ಆಗಿ ಹೋಗಿದೆ. ಯಾವುದೇ ಚರ್ಚೆ ಇಲ್ಲದೆ ಪಾಸ್ ಆಗಿರೋದೇ ಇವತ್ತು ಸಮಸ್ಯೆ ತಂದಿಟ್ಟಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.