ಬೆಂಗಳೂರು: ಓವರ್ಟೇಕ್ ವೇಳೆ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ನಡೆದಿದೆ.
ರಮೇಶ್(39) ಮೃತ ದುರ್ದೈವಿ. ತಡರಾತ್ರಿ 1.30 ರ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬಂದಿದ್ದ ಕೆಎಸ್ಆರ್ಟಿಸಿ ಬಸ್ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆ ಮೂಲಕ ಮೆಜೆಸ್ಟಿಕ್ ಮಾರ್ಗವಾಗಿ ತೆರಳುತ್ತಿತ್ತು. ಈ ವೇಳೆ ಬೈಕ್ನಲ್ಲಿ ಹೋಗುತ್ತಿದ್ದ ರಮೇಶ್, ಓವರ್ ಟೇಕ್ ಮಾಡಿ ಬಲತಿರುವು ಪಡೆದುಕೊಳ್ಳುವಾಗ ಬಸ್ ಡಿಕ್ಕಿಯಾಗಿ ನೆಲಕ್ಕೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಡ್ರಂಕ್ ಆ್ಯಂಡ್ ಡ್ರೈವ್ ಆರೋಪ: ರಮೇಶ್ ಮದ್ಯಪಾನ ಮಾಡಿ ಬೈಕ್ ಅಪಘಾತ ಮಾಡಿಕೊಂಡಿದ್ದಾರೆ. ಆದರೆ ಘಟನೆ ನಂತರ ಮೃತರ ಕಡೆಯ ಸುಮಾರು 15-20 ಜನ ಸ್ನೇಹಿತರು ನಮಗೆ ಮನಬಂದಂತೆ ಥಳಿಸಿದ್ದಾರೆ ಎಂದು ಕೆಎಸ್ಆರ್ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಆರೋಪಿಸಿದ್ದಾರೆ.
ಸ್ಥಳದಲ್ಲಿ ಮದ್ಯದ ಬಾಟಲಿ ಪತ್ತೆ: ಅಪಘಾತವಾಗಿದ್ದ ಬೈಕ್ ಬಳಿ ಮದ್ಯದ ಬಾಟಲಿಗಳು ಕೂಡ ಪತ್ತೆಯಾಗಿವೆ. ಬೈಕ್ ಸವಾರ ಕುಡಿದು ಗಾಡಿ ಓಡಿಸಿದ್ದನಾ?, ಇಲ್ಲವೇ ಪಾರ್ಟಿ ಮಾಡುವ ಆತುರದಲ್ಲಿ ಅಪಘಾತವಾಯಿತಾ? ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಈ ಸಂಬಂಧ ರಾಜಾಜಿನಗರ ಸಂಚಾರಿ ಮತ್ತು ಕಾನೂನು ಸುವ್ಯವಸ್ಥೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರು-ಬಸ್ ನಡುವೆ ಭೀಕರ ರಸ್ತೆ ಅಪಘಾತ: 11 ಮಂದಿ ದುರ್ಮರಣ