ಬೆಂಗಳೂರು : ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಶಂಕಿಸಿ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪದಡಿ ಪತಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ವೆಂಕಟೇಶ್ ಎಂಬುವರನ್ನು ಹತ್ಯೆ ಮಾಡಿದ ಆರೋಪದಡಿ ಸಿದ್ದರಾಜು ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ಗಿರಿನಗರದ ಮುನೇಶ್ವರ ಬ್ಲಾಕ್ನಲ್ಲಿ ಸಿದ್ದರಾಜು ಕುಟುಂಬ ವಾಸವಾಗಿತ್ತು. ಕಳೆದ 12 ವರ್ಷಗಳ ಹಿಂದೆ ಸಿದ್ದರಾಜು ಮದುವೆ ಮಾಡಿಕೊಂಡಿದ್ದ. ಪತಿ-ಪತ್ನಿಯರ ನಡುವೆ ವೈಮನಸ್ಸು ಮೂಡಿತ್ತು. ಇದಕ್ಕೆ ಕಾರಣ ಪತ್ನಿಯು ಪರಪುರುಷನ ಜೊತೆ ಸಂಬಂಧ ಹೊಂದಿರುವುದಾಗಿ ಸಿದ್ದರಾಜು ಶಂಕೆ ವ್ಯಕ್ತಪಡಿಸಿದ್ದ. ಇದಕ್ಕೆ ಪೂರಕವೆಂಬಂತೆ ಪತ್ನಿಯೂ ವೆಂಕಟೇಶ್ ನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಕಳೆದ ಮೂರು ತಿಂಗಳಿಂದ ಇದೇ ವಿಚಾರಕ್ಕಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತಿತ್ತು.
ಕಳೆದ ಎರಡು ದಿನಗಳ ಹಿಂದೆ ವೆಂಕಟೇಶ್ ನೊಂದಿಗೆ ಪತ್ನಿಯು ಮಾತನಾಡುತ್ತಿರುವುದನ್ನು ಕಂಡು ಸಿದ್ದರಾಜು ಸಿಟ್ಟಿಗೆದ್ದಿದ್ದ. ನಡುರಸ್ತೆಯಲ್ಲಿ ವಾಗ್ವಾದಕ್ಕೆ ಇಳಿದು ಗಲಾಟೆ ಮಾಡಿ ಚಪ್ಪಲಿಯಿಂದ ವೆಂಕಟೇಶ್ಗೆ ಹೊಡೆದು ಜೋರಾಗಿ ತಳ್ಳಿದ್ದ. ಫುಟ್ ಪಾತ್ನಿಂದ ಸುಮಾರು ನಾಲ್ಕು ಅಡಿ ಎತ್ತರದಿಂದ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ವೆಂಕಟೇಶ್ ಕುಸಿದುಬಿದ್ದಿದ್ದ. ಕೂಡಲೇ ಸಿದ್ದರಾಜು ವೆಂಕಟೇಶ್ನನ್ನು ಆಸ್ಪತ್ರೆಗೆ ಸೇರಿಸಿದ್ದ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಭಾನುವಾರ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೈಸೂರಿನಲ್ಲೂ ಇಂತಹದ್ದೇ ಘಟನೆ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತಿಯೋರ್ವ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಹೊಸಹಳ್ಳಿ ಗ್ರಾಮದ ನಿವಾಸಿ ಮಹದೇವಸ್ವಾಮಿ (39) ಕೊಲೆಯಾದ ವ್ಯಕ್ತಿ. ಸೋಮಯ್ಯ ಕೊಲೆಗೈದ ಆರೋಪಿ.
ಶನಿವಾರ ಮಧ್ಯಾಹ್ನ ಗ್ರಾಮದ ಚಾವಡಿ ಸಮೀಪದಲ್ಲಿ ಮಹದೇವಸ್ವಾಮಿ ಮಲಗಿದ್ದಾಗ ಸ್ಥಳಕ್ಕೆ ಆಗಮಿಸಿದ ಆರೋಪಿ ಸೋಮಯ್ಯ, ನನ್ನ ಪತ್ನಿಯೊಂದಿಗೆ ನೀನು ಅಕ್ರಮ ಸಂಬಂಧ ಹೊಂದಿದ್ದಿ ಎಂದು ಕ್ಯಾತೆ ತೆಗೆದಿದ್ದಾನೆ. ಗಲಾಟೆ ತಾರಕಕ್ಕೇರಿ ಸೋಮಯ್ಯ, ಮಹದೇವಸ್ವಾಮಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಹಲ್ಲೆಗೊಳಗಾದ ಮಹದೇವಸ್ವಾಮಿಯ ಮಾವ ರವಿ ಎಂಬವರು, ಆತನನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ನಂತರ ಮೈಸೂರು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಧಾರವಾಡ: ಮಚ್ಚಿನಿಂದ ಹಲ್ಲೆ ಮಾಡಿ ವ್ಯಕ್ತಿ ಹತ್ಯೆ