ETV Bharat / state

ಬೆಂಗಳೂರು: ಮಹಿಳಾ ಐಪಿಎಸ್ ಅಧಿಕಾರಿ ಕಾರಿಗೆ ಬೈಕ್‌ನಲ್ಲಿ ಗುದ್ದಿ ನಿಂದಿಸಿದ ವ್ಯಕ್ತಿ ಸೆರೆ - threatened to officer

ಬಿಎಂಟಿಎಫ್ ಎಸ್​ಪಿ ಸಂಚರಿಸುತ್ತಿದ್ದ ಕಾರಿಗೆ ದ್ವಿಚಕ್ರ ವಾಹನವೊಂದು ಹಿಂದಿನಿಂದ ಡಿಕ್ಕಿಯಾಗಿದೆ. ಇದನ್ನು ಪ್ರಶ್ನಿಸಿದ ಅಧಿಕಾರಿಯನ್ನೇ ಸವಾರ ಸಾರ್ವಜನಿಕವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದೆ.

bengaluru news
ಬಂಧನ
author img

By ETV Bharat Karnataka Team

Published : Jan 7, 2024, 9:51 AM IST

ಬೆಂಗಳೂರು: ಐಪಿಎಸ್ (ಭಾರತೀಯ ಪೊಲೀಸ್ ಸೇವೆ) ಮಹಿಳಾ​ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರಿಗೆ ದ್ವಿಚಕ್ರ ವಾಹನ ತಾಗಿದ್ದಕ್ಕೆ ಗಲಾಟೆ ಮಾಡಿಕೊಂಡು ಬೆದರಿಕೆ ಹಾಕಿರುವ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ 3ರಂದು ಆರ್​ಎಂಸಿ ಯಾರ್ಡ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿ.ಅಭಿಷೇಕ್ (22) ಪ್ರಕರಣದ ಆರೋಪಿ.

ಚಿಕ್ಕಬಾಣವಾರದ ನಿವಾಸಿ ಅಭಿಷೇಕ್ ಚಾರ್ಟೆಡ್ ಅಕೌಂಟೆಂಟ್​ ವಿದ್ಯಾರ್ಥಿಯಾಗಿದ್ದು ತರಬೇತಿ ಅವಧಿಯಲ್ಲಿದ್ದಾನೆ. ಈತ ಜನವರಿ 3ರಂದು ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದನು. ಬೆಂಗಳೂರು ಮೆಟ್ರೋಪಾಲಿಟನ್​ ಟಾಸ್ಕ್ ಪೋರ್ಸ್ (ಬಿಎಂಟಿಎಫ್) ಎಸ್​ಪಿ ಡಾ.ವಿ.ಜೆ.ಶೋಭಾರಾಣಿ ತಮ್ಮ ಸರ್ಕಾರಿ ಕಾರಿನಲ್ಲಿ ಅದೇ ದಿನ ಬೆಳಿಗ್ಗೆ ಸುಮಾರು 10:15ರ ಸುಮಾರಿಗೆ ಬಿಬಿಎಂಪಿ ಕಚೇರಿಗೆ ತೆರಳುತ್ತಿದ್ದರು.

ಗೊರಗುಂಟೆಪಾಳ್ಯದ ಸಿಗ್ನಲ್ ಸಮೀಪ ತೆರಳುತ್ತಿದ್ದಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಭಿಷೇಕ್, ನಿಯಂತ್ರಣ ತಪ್ಪಿ ಶೋಭಾರಾಣಿಯವರಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿನಿಂದ ಕೆಳಗಿಳಿದ ಎಸ್​ಪಿ ಕಾರು ಚಾಲಕ, ಅಭಿಷೇಕ್​ನನ್ನು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಕಾರಿನಿಂದ ಕೆಳಗಿಳಿದಿದ್ದ ಎಸ್​ಪಿ ಅವರೊಂದಿಗೂ ಸಹ ಅಭಿಷೇಕ್‌ ಗಲಾಟೆ ಮಾಡಿದ್ದಾನೆ. ಸಾರ್ವಜನಿಕವಾಗಿ ನಿಂದಿಸಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ತಕ್ಷಣ ಸ್ಥಳದಲ್ಲಿದ್ದ ಸಂಚಾರ ಪೊಲೀಸರ ನೆರವಿನಿಂದ ಅಭಿಷೇಕ್‌ನನ್ನು ವಶಕ್ಕೆ ಪಡೆದು ಆರ್​ಎಂಸಿ ಯಾರ್ಡ್​ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಆತನ ವಿರುದ್ಧ ಕ್ರಮ ಜರುಗಿಸುವಂತೆ ಎಸ್‌ಪಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆತನಿಗೆ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.