ಬೆಂಗಳೂರು : ಪೊಲೀಸರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಪ್ರಕರಣವನ್ನು ಗುರುವಾರ ಸಿಸಿಬಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ತಲಘಟ್ಟಪುರದ ನಾಗರಾಜ್ ಎಂಬವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವೈಯಾಲಿಕಾವಲ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ.
ನಾಗರಾಜ್ ಆತ್ಮಹತ್ಯೆಗೂ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ವೈಯಾಲಿಕಾವಲ್ ಠಾಣಾಧಿಕಾರಿ ಹಾಗೂ ಇತರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ತಲಘಟ್ಟಪುರದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದ್ದು, ಸಿಸಿಬಿಯ ವಿಶೇಷ ತನಿಖಾ ಘಟಕ ವಿಚಾರಣೆ ಮುಂದುವರಿಸಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ನಾಗರಾಜ್ ಕೆಲ ವ್ಯಕ್ತಿಗಳಿಂದ ಸಾಲ ಕೊಡಿಸುವುದಾಗಿ ಮುಂಗಡ ಹಣ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯಿದ್ದು, ಈ ಕುರಿತು ಎನ್‌ವೇರ್‌ಮೆಂಟ್ ಪೊಲೂಷನ್ ಪ್ರಾಜೆಕ್ಟ್ (ಇಪಿಪಿ) ಮಾಲೀಕ ಸನಾವುಲ್ಲಾ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪೊಲೀಸರ ಕಿರುಕುಳ ಆರೋಪ: ಬೆಂಗಳೂರಲ್ಲಿ ಓರ್ವ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ನಾಗರಾಜ್ ಅವರು ಸನಾವುಲ್ಲಾ ಒಡೆತನದ ಇಪಿಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವುದಾಗಿ ನಟರಾಜ್ ಎಂಬವರು ವೈಯಾಲಿಕಾವಲ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು. ಆದರೆ, ಹಲವು ಜನರಿಂದ ಹಣ ಪಡೆದು ವಂಚಿಸಿರುವ ಕಂಪನಿ ಮಾಲೀಕ ಸನಾವುಲ್ಲಾ ಬದಲಾಗಿ ನಾಗರಾಜ್ ಅವರನ್ನು ಪೊಲೀಸರು ಕರೆದೊಯ್ದು ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು. ಇದರಿಂದ ಮನನೊಂದ ನಾಗರಾಜ್ 2 ಪುಟಗಳ ಡೆತ್‌ನೋಟ್ ಬರೆದು ಬುಧವಾರ ಮಧ್ಯಾಹ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಈ ಸಂಬಂಧ ಸ್ಥಳಕ್ಕೆ ತಲಘಟ್ಟಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಡೆತ್‌ನೋಟ್ ಪತ್ತೆಯಾಗಿತ್ತು. ಡೆತ್‌ನೋಟ್ ಪರಿಶೀಲಿಸಿದಾಗ ವೈಯಾಲಿ ಕಾವಲ್ ಠಾಣೆಯ ಪೊಲೀಸ್ ಇನ್‌ಸ್ಪೆೆಕ್ಟರ್, ಇಪಿಪಿ ಕಂಪನಿ ಮಾಲೀಕ ಸನಾವುಲ್ಲಾ, ನಟರಾಜ್, ಎಂ.ಸಿ ಯೆರ್ರೇಗೌಡ ಹೆಸರನ್ನೂ ಉಲ್ಲೇಖಿಸಲಾಗಿತ್ತು. ಪೊಲೀಸರ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಆರೋಪ ಬಂದಿರುವ ಹಿನ್ನೆಲೆ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :₹15 ಲಕ್ಷ ಹಫ್ತಾ ನೀಡುವಂತೆ ಡಿಮ್ಯಾಂಡ್ ಆರೋಪ: ಮಾಜಿ ರೌಡಿಶೀಟರ್, ಬಿಜೆಪಿ ಮುಖಂಡ ಅರೆಸ್ಟ್