ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ನಕಲಿ ಪೊಲೀಸ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಎಸ್ಪಿ ಸೋಗಿನಲ್ಲಿ ವ್ಯಕ್ತಿಯೋರ್ವರಿಂದ 1.75 ಕೋಟಿ ರೂಪಾಯಿ ವಂಚಿಸಲಾಗಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ವೆಂಕಟನಾರಾಯಣ ಎಂಬುವರು ನೀಡಿದ ದೂರಿನ ಮೇರೆಗೆ ನಕಲಿ ಎಸ್ಪಿ ಶ್ರೀನಿವಾಸ್ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ವೆಂಕಟ ನಾರಾಯಣ ಅವರಿಗೆ 2022ರಲ್ಲಿ ಶ್ರೀನಿವಾಸ್ ಪರಿಚಯವಾಗಿತ್ತು. ಈ ವೇಳೆ ಬೆಂಗಳೂರಿನ ದಕ್ಷಿಣ ವಿಭಾಗದ ಎಸ್ಪಿ ಎಂದು ಪರಿಚಯಿಸಿಕೊಂಡಿದ್ದ. ಕಾಲ ಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ.
ಐಪಿಎಸ್ ಅಧಿಕಾರಿ ಎಂಬ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಆತ್ಮೀಯತೆ ಬೆಳೆದಿತ್ತು. ಬಳಿಕ ನಂತರ ವೆಂಕಟನಾರಾಯಣ , ಶ್ರೀನಿವಾಸ್ ಇನ್ನೂ ಹಲವರು ಸೇರಿ ಕಾರಿನಲ್ಲಿ ತಿರುಪತಿಗೆ ಹೋಗಿದ್ದರಂತೆ. ಈ ವೇಳೆ ತಾನು ಮೈಸೂರಿನಲ್ಲಿರುವ ಲ್ಯಾಂಡ್ ಲಿಟಿಗೇಷನ್ ಹ್ಯಾಂಡಲ್ ಮಾಡುತ್ತಿದೇನೆ. ಸಕ್ಸಸ್ ಆದರೆ 450 ಕೋಟಿಯಲ್ಲಿ 250 ಕೋಟಿ ರೂ ಬರುತ್ತದೆ. ಎಲ್ಲಾ ಮುಗಿದರೆ ಕೇಸ್ ರೆವಿನ್ಯೂ ಡಿಪಾರ್ಟ್ಮೆಂಟ್ ಬಳಿ ಇದೆ. ಹೀಗಾಗಿ 2.5 ಕೋಟಿ ಹಣ ಬೇಕು, ಹೊಂದಿಸಿಕೊಡಿ ಎಂದು ವೆಂಕಟ ನಾರಾಯಣ ಬಳಿ ಕೇಳಿದ್ದನಂತೆ.
ಇದನ್ನು ನಂಬಿದ ವೆಂಕಟ ನಾರಾಯಣ ತನ್ನ ಬಳಿ ಹಾಗೂ ತನ್ನ ಸ್ನೇಹಿತರ ಬಳಿ ಹಣ ಪಡೆದು ಹಂತ ಹಂತವಾಗಿ ಹಣ ನೀಡಿದ್ದರಂತೆ. ದುಡ್ಡು ಸಿಗುತ್ತಿದ್ದಂತೆ ನಕಲಿ ಅಧಿಕಾರಿಯ ಅಸಲಿತ್ತು ಹೊರಬಿದ್ದಿದೆ. ಎಲ್ಲಿಯೂ ಸುಳಿವು ಬಿಡದ ನಕಲಿ ಶ್ರೀನಿವಾಸ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶ್ರೀನಿವಾಸ್ ಪರಾರಿಯಾಗಿದ್ದಾನೆ. ಇನ್ನು ತನ್ನ ಸ್ನೇಹಿತರಿಂದ ಹಣ ಪಡೆದ ಹಿನ್ನೆಲೆಯಲ್ಲಿ ವೆಂಕಟನಾರಾಯಣ ಸಂಕಷ್ಟಕ್ಕೆ ಒಳಗಾಗಿದ್ದು, ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲ್ವೆ ಪೊಲೀಸ್ ಸಿಬ್ಬಂದಿ ವಶಕ್ಕೆ: ಮತ್ತೊಂದೆಡೆ ಚಿನ್ನ ಖರೀದಿಸಿ ವಾಪಸ್ ಆಗುತ್ತಿದ್ದವರನ್ನು ಬೆದರಿಸಿ 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಕಸಿದು ಪರಾರಿಯಾಗಿರುವ ಪ್ರಕರಣದ ಆರೋಪಿಗಳು ರೈಲ್ವೆ ಪೊಲೀಸ್ ಸಿಬ್ಬಂದಿ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಜ್ಞಾನೇಶ್ ಹಾಗೂ ವಟಾವಟಿ ಎಂಬ ಇಬ್ಬರು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಉಪ್ಪಾರ ಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಎಂಬವರನ್ನು ತಡೆದು ಬೆದರಿಸಿದ್ದ ಆರೋಪಿಗಳು ಅವರ ಬಳಿಯಿದ್ದ ಚಿನ್ನದ ಗಟ್ಟಿ ಪಡೆದುಕೊಂಡು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ ಪರಾರಿಯಾಗಿದ್ದರು.
ಇದನ್ನೂ ಓದಿ: ₹1 ಕೋಟಿಯ ಚಿನ್ನದ ಗಟ್ಟಿ ಕಸಿದು ಪರಾರಿಯಾದವರು ರೈಲ್ವೆ ಪೊಲೀಸ್ ಸಿಬ್ಬಂದಿ!