ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಯುವಜನತೆಗೆ ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳ ಗೀಳು ಅಂಟಿಕೊಂಡಿದೆ. ತಮ್ಮ ನೆಚ್ಚಿನ ಸಂಗಾತಿಗಳನ್ನು ಕುಳಿತಲ್ಲಿಯೇ ಹುಡುಕುವ ಕಾಲ ಇಂದಿನದು. ಅದೇ ರೀತಿ ಟಿಂಡರ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಸ್ಕೂಲ್ ಟೀಚರ್ ಒಬ್ಬರನ್ನು ಮದುವೆಯಾಗುವುದಾಗಿ ಆರೋಪಿಯೊಬ್ಬ ನಂಬಿಸಿದ್ದಾನೆ. ಅಷ್ಟೇ ಅಲ್ಲ, ಹೀಗೆ ನಂಬಿಸಿ ಹಂತ ಹಂತವಾಗಿ 34 ಲಕ್ಷ ರೂ. ಟೋಪಿ ಹಾಕಿದ್ದಾನೆ. ಈ ವಂಚಕನನ್ನು ವಿವೇಕ ನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಜೋ ಅಬ್ರಹಾಂ ಮ್ಯಾಥಿವ್ಸ್ ಬಂಧಿತ ವ್ಯಕ್ತಿ. ಈತ ಹಲವು ವರ್ಷಗಳಿಂದ ಕೋರಮಂಗಲದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾನೆ. ಬಿಕಾಂ ಪದವೀಧರನಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಐಷಾರಾಮಿ ಜೀವನಕ್ಕೆ ಜೋತು ಬಿದ್ದಿದ್ದ ಈತ ಶ್ರೀಮಂತನೆಂದು ಬಿಂಬಿಸಿಕೊಳ್ಳಲು ಬಾಡಿಗೆಗೆ ಕಾರು ಪಡೆದು ತನ್ನದೇ ಕಾರೆಂದು ಹುಡುಗಿಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದನಂತೆ. ಹೀಗೆ ದಿನ ಕಳೆದಂತೆ ಐಷಾರಾಮಿ ಜೀವನಕ್ಕೆ ಸ್ನೇಹಿತರ ಬಳಿ ಸುಳ್ಳು ಹೇಳಿ ಲಕ್ಷಾಂತರ ರೂ ಹಣ ಪಡೆದುಕೊಳ್ಳುತ್ತಿದ್ದ. ಕೊಟ್ಟ ಹಣವನ್ನು ವಾಪಸ್ ಕೊಡದೆ ಆರೋಪಿ ಕಾರು ತೆಗೆದುಕೊಂಡು ಸುತ್ತಾಡುತ್ತಿದ್ದ.
ಹೀಗಿರಬೇಕಾದರೆ ಟಿಂಡರ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನು ಬಲೆಗೆ ಬೀಳಿಸಿ ಪಬ್, ಹೋಟೆಲ್ ಎಂದು ಸುತ್ತಾಡಿಸ್ತಿದ್ದ. ಅದೇ ರೀತಿ ಆ್ಯಪ್ ಮುಖಾಂತರ ಸ್ಕೂಲ್ ಟೀಚರ್ ಆಗಿದ್ದ ಯುವತಿಯ ಪರಿಚಯವಾಗಿದೆ. ಕಾಲ ಕ್ರಮೇಣ ಇಬ್ಬರು ಪರಸ್ಪರ ಚಾಟ್ ಮಾಡಿಕೊಂಡಿದ್ದಾರೆ. ತದನಂತರ ಮೊಬೈಲ್ ನಂಬರ್ ವಿನಿಮಯವೂ ಆಗಿದೆ. ಸ್ನೇಹ, ಭೇಟಿಗೆ ಕಾರಣವಾಗಿತ್ತು. ಈ ಶಿಕ್ಷಕಿ ಬಳಿ ಕಾರ್ ಬ್ಯು ಸಿನೆಸ್ ಮ್ಯಾನ್ ಎಂದು ಸುಳ್ಳು ಹೇಳಿದ್ದಾನೆ. ಮದುವೆಯಾಗುವುದಾಗಿ ಯುವತಿಯನ್ನು ಹೊಟೇಲ್- ಪಬ್ಗೆ ಕರೆದೊಯ್ದು ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಎನ್ನಲಾಗಿದೆ. ಸಲುಗೆ ಹೆಚ್ಚಾಗುತ್ತಿದ್ದಂತೆ ಆರೋಪಿಯ ಅಸಲಿ ಮುಖವಾಡವೂ ಕಳಚಿ ಬೀಳಲು ಶುರುವಾಗಿದೆ. ತನ್ನ ತಂಗಿ ಮದುವೆ ಮಾಡಬೇಕು ಎಂದು ನೆಪ ಹೇಳಿ ಹಂತ-ಹಂತವಾಗಿ ಯುವತಿಯಿಂದ 34 ಲಕ್ಷ ಹಣ ಪಡೆದು ವಂಚಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಈ ಸಂಬಂಧ ನೊಂದ ಯುವತಿ ವಿವೇಕನಗರ ಪೊಲೀಸರಿಗೆ ದೂರು ನೀಡಿದ್ದಳು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲೂ ವಂಚನೆ..
ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನ ಸಂಪರ್ಕಿಸಿ ಮದುವೆ ಆಗುತ್ತೇನೆ ಎಂದು ನಂಬಿಸಿ ಲಕ್ಷಗಟ್ಟಲೆ ಹಣ ಪಡೆದು ಆರೋಪಿ ವಂಚಿಸುತ್ತಿದ್ದ ಎನ್ನುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿ ಬಂಧನದಿಂದ ಒಟ್ಟು 10 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಕೇರಳದಲ್ಲಿ 2 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ ಲೈನ್ ಡೇಟಿಂಗ್ ಆ್ಯಪ್ ಬಳಸುವವರೇ ಎಚ್ಚರ! ಈ ವಿಚಾರಗಳು ನಿಮಗೆ ಗೊತ್ತಿರಲಿ...
- ಡೇಟಿಂಗ್ ಆ್ಯಪ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ.
- ಸ್ಟೇಟಸ್‌ಗಳಿಗೆ ತಮ್ಮ ನಿಜವಾದ ಪ್ರೊಫೈಲ್ ಫೋಟೊ ಹಾಕದೆ ನಕಲಿ ಪ್ರೊಫೈಲ್ ಹಾಕಿ ಯಾಮಾರಿಸುತ್ತಾರೆ.
- ಅಕೌಂಟ್ ಪ್ರೈವೆಸಿ ಬಗ್ಗೆ ಜಾಗೃತಿ ಇರಲಿ.
- ನಿಮ್ಮ ವೀಕ್ನೆಸ್ ಅರಿತು ಬ್ಲಾಕ್‌ಮೇಲ್ ಮಾಡುತ್ತಾರೆ ಎಚ್ಚರವಿರಲಿ.
- ಸರಿಯಾದ ಮಾಹಿತಿ ಇಲ್ಲದೆ ಪ್ರೀತಿಸುವ ಸಾಹಸಕ್ಕೆ ಮುಂದಾಗಿ ಕೈ ಸುಟ್ಟುಕೊಳ್ಳಬೇಡಿ.