ಬೆಂಗಳೂರು: ದೇಶದ ಅತಿ ಭ್ರಷ್ಟ, ಗೂಂಡಾ, ಅವಿವೇಕಿ ರಾಜಕಾರಣಿ ಮಮತಾ ಬ್ಯಾನರ್ಜಿ ಆಗಿದ್ದಾರೆ. ರಾಮಾಯಣದ ಲಂಕಿಣಿಗೆ ಅವರು ಸರಿಸಮಾನ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರ್ಯಾಲಿ ವೇಳೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ನಡೆಸಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಟಿಎಂಸಿ ಕಾರ್ಯಕರ್ತರು ಗೂಂಡಾಗಳಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ದೌರ್ಜನ್ಯ, ಲೂಟಿ ಮಾಡುತ್ತಿದ್ದಾರೆ. ಮತ ಹಾಕಲು ಹೋಗುವವರಿಗೆ ಹತ್ಯೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಅಮಿತ್ ಶಾ, ಮೋದಿ, ಯೋಗಿ, ರಾಜನಾಥ್ ಸಿಂಗ್ ಬೇರೆ ಬೇರೆ ರಾಜ್ಯಗಳಿಗೆ ಹೋಗಿದ್ದರು ಎಲ್ಲಿಯೂ ನಾವು ಯಾರನ್ನೂ ಎತ್ತಿಕಟ್ಟಲಿಲ್ಲ. ನಾವು ಎತ್ತಿಕಟ್ಟುವುದಾಗಿದ್ದರೆ ರಾಜಸ್ಥಾನ, ಛತ್ತೀಸ್ಘಡ, ಮಧ್ಯಪ್ರದೇಶ, ತೆಲಂಗಾಣ ಸೇರಿ ಎಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಲ್ಲೆಲ್ಲಾ ಗಲಭೆ ಮಾಡಿಸಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ರಾಮಾಯಣದ ಲಂಕಿಣಿ ಮಮತಾ ಬ್ಯಾನರ್ಜಿಗೆ ಸರಿಸಮಾನ. ಆಂಜನೇಯ ಹೋದ ನಂತರ ಲಂಕಿಣಿ ಕಥೆ ಮುಗಿಯುವ ರೀತಿ ಆಗಲಿದೆ ಎಂದು ಪೌರಾಣಿಕ ಸನ್ನಿವೇಶ ಉಲ್ಲೇಖಿಸಿ ಕುಟುಕಿದರು.
ಮಮತಾ ನಡೆಸುತ್ತಿರುವ ದೌರ್ಜನ್ಯಕ್ಕೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. ಅವರ ನೆಲೆ ಕುಸಿಯುತ್ತಿದೆ ಬೇರೆ ಗತಿಯಿಲ್ಲ. ಮುಳುಗಿ ಹೋಗುತ್ತಿದ್ದೇವೆ ಎಂದು ಕಾಂಗ್ರೆಸ್ನ ಕಾಲು ಹಿಡಿಯಲು ಹೋಗುತ್ತಿದೆ. ಅಲ್ಲಿ ನಿಮ್ಮ ಶಾಸಕರೇ ಬಂಡಾಯವೆದ್ದಿದ್ದಾರೆ, ಗೂಂಡಾಗಿರಿ ಅವರಿಗೆ ಸಾಕಾಗಿದೆ. ಅಲ್ಲಿನ ಜನರು ಮ್ಯಾಡ್ ವುಮನ್ ಬೇಡ ಎನ್ನುತ್ತಿದ್ದಾರೆ ಎಂದರು.