ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದು, ಗೆಲ್ಲುವ ವಿಶ್ವಾಸವಿದೆ, ಬಿಜೆಪಿ ತೊರೆಯುವ ಚಿಂತನೆ ಇಲ್ಲ, ಶಿಸ್ತುಕ್ರಮ ಕೈಗೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಹಾಗು ಬಿಜೆಪಿ ಬಂಡಾಯ ಅಭ್ಯರ್ಥಿ ಮಾಲೂರು ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ.
ಗಾಂಧಿನಗರದ ತಮ್ಮ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವನು. ನಮ್ಮ ಜನಸಂಖ್ಯೆ ಕಡಿಮೆ, ಆದರೆ ಗಾಂಧಿನಗರ ಸರ್ವೆಯಲ್ಲೂ ನನ್ನ ಹೆಸರೇ ಬಂದಿದೆ, ಇಲ್ಲಿನ ಕಾರ್ಯಕರ್ತರ ಅಭಿಪ್ರಾಯವೂ ನನ್ನ ಪರವೇ ಬಂದಿದೆ. ನನಗೆ ಟಿಕೆಟ್ ಯಾಕೆ ತಪ್ಪಿತು ಅಂತ ಅರ್ಥ ಆಗಿಲ್ಲ. ಇಲ್ಲಿನ ಸಂಸದರು ಹೊಂದಾಣಿಕೆ ಪಾಲಿಟಿಕ್ಸ್ ಮಾಡುತ್ತಾರೆ. ಅವರಿಂದಲೇ ನನಗೆ ಟಿಕೆಟ್ ತಪ್ಪಿದ್ದು, ನಾನು ನನ್ನ ಜನಸೇವೆ ಮತ್ತು ಮೋದಿಯವರ ಕೊಡುಗೆ ಮುಂದಿಟ್ಕೊಂಡು ಮತ ಯಾಚನೆ ಮಾಡುತ್ತೇನೆ ಎಂದರು.
ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಯಾರೇ ಒತ್ತಾಯ ಮಾಡಿದರು ನಾಮಪತ್ರ ವಾಪಸ್ ಪಡೆದಿಲ್ಲ. ಆದರೆ ನಾನು ಬಿಜೆಪಿ ಬಿಟ್ಟು ಹೋಗಲ್ಲ, ಬಿಜೆಪಿಯಲ್ಲೇ ಇರುತ್ತೇನೆ. ನನ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳೋದು ನಾಯಕರಿಗೆ ಬಿಟ್ಟ ವಿಚಾರ. ಆದರೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ, ಗೆದ್ದೇ ಗೆಲ್ಲುವ ವಿಶ್ವಾಸ ಇದೆ ಎಂದರು.
ಯಡಿಯೂರಪ್ಪನವರು ದುಡುಕಬೇಡ ಅಂದರು ಅಷ್ಟೇ. ಉಳಿದ ಯಾವ ನಾಯಕರೂ ನನ್ನನ್ನು ಇಲ್ಲಿಯವರೆಗೆ ಸಂಪರ್ಕಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದ ಕೃಷ್ಣಯ್ಯ ಶೆಟ್ಟಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದಕ್ಕೆ ಪಕ್ಷ ಯಾವ ನಿರ್ಧಾರ ತೆಗೆದುಕೊಂಡರೂ ಸ್ವಾಗತ ಎಂದರು.
ಇದನ್ನೂ ಓದಿ; ನಮ್ಮ ಗುರಿ ಮುಟ್ಟೋದಕ್ಕೆ ರಾಹುಲ್ ಗಾಂಧಿ ಸಹಕಾರ ನೀಡಬೇಕು: ಕೆ ಎಸ್ ಈಶ್ವರಪ್ಪ