ಬೆಂಗಳೂರು: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮೇಲೆ ರಾಜಕೀಯ ದುರುದ್ದೇಶದಿಂದ ಐಎನ್‌ಎಕ್ಸ್ ಮೀಡಿಯಾ ಹಗರಣ ಪ್ರಕರಣ ದಾಖಲಿಸಲಾಗಿತ್ತು. ಕೊನೆಗೂ ಸುಪ್ರೀಂಕೋರ್ಟ್ ತೀರ್ಪಿನಿಂದ ಅವರಿಗೆ ಗೆಲುವು ಸಿಕ್ಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ತೀರ್ಪು ತಡವಾಗಿ ಬಂದರೂ, ಅದನ್ನು ನಾನು ಸ್ವಾಗತಿಸುತ್ತೇನೆ. ಕಾನೂನು ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಲಿ. ಅದನ್ನ ಬಿಟ್ಟು ಬೇಕಂತಲೇ ಪ್ರಕರಣ ದಾಖಲಿಸೋದು ಬೇಡ. ಕೋರ್ಟ್ ತೀರ್ಪು ನೀಡಿದೆ, ಆದ್ರೆ ಬಹಳ ವಿಳಂಬವಾಗಿದೆ. ಮೂರು ತಿಂಗಳಿಂದ ಜೈಲುವಾಸ ಮಾಡಬೇಕಾಗಿ ಬಂತು. ಚಿದಂಬರಂ ಓರ್ವ ಆರ್ಥಿಕ ತಜ್ಞ, ರಾಜಕೀಯ ಧುರಿಣ ಮತ್ತು ಕಾನೂನು ತಜ್ಞ ಆಗಿದ್ದಾರೆ. ಸಾಕ್ಷ್ಯಗಳನ್ನ ಅವರೇನೂ ನಾಶ ಮಾಡಲ್ಲ, ಚಿದಂಬರಂ ಉತ್ತಮ ವ್ಯಕ್ತಿತ್ವ ಹೊಂದಿದವರು ಅಂತಾ ಕೋರ್ಟ್ ಹೇಳಿದೆ ಎಂದು ಸುಪ್ರೀಂಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿರುವ ಬಗ್ಗೆ ಖರ್ಗೆ ಪ್ರತಿಕ್ರಿಯೆ ನೀಡಿದರು.
ಉಪ ಚುನಾವಣೆ ಬಳಿಕ ಏನು ಮಾಡಬೇಕು ಅನ್ನೋ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. 15 ಕ್ಷೇತ್ರಗಳಲ್ಲಿ ಬಹುತೇಕ ನಾವು ಗೆಲ್ಲುತ್ತೇವೆ. ನಾನು 50 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ನನ್ನನ್ನ ಒಂದು ಜಾತಿಗೆ ಮೀಸಲು ಮಾಡಬೇಡಿ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.
ಮತ್ತೆ ಆಪರೇಷನ್ ಕಮಲ ನಡೆಯುವ ವಿಚಾರವು ನನಗೆ ಗೊತ್ತಿಲ್ಲ. ಅದೆಲ್ಲ ಡಿ.9ರ ಬಳಿಕ ಗೊತ್ತಾಗುತ್ತೆ. ಬಿಜೆಪಿಗೆ ಎಷ್ಟು ಸ್ಥಾನ ಬರುತ್ತೆ, ಜೆಡಿಎಸ್ಗೆ ಎಷ್ಟು ಸ್ಥಾನ ಬರುತ್ತೆ, ಎಂಬುದನ್ನು ನೋಡೋಣ. ಗೊತ್ತಿಲ್ಲದ ವಿಚಾರದ ಬಗ್ಗೆ ಹೇಳಿಕೆ ನೀಡೋದು ಬೇಡ ಎಂದು ಖರ್ಗೆ ಹೇಳಿದ್ರು.
ಮಹಾರಾಷ್ಟ್ರದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಜ್ಯ ನಾಯಕರ ಜೊತೆ ಮಾತಾಡಿದ ವಿಚಾರ ಗೊತ್ತಿಲ್ಲ. ಊಹಾಪೋಹದ ಪ್ರಶ್ನೆಗಳ ಬಗ್ಗೆ ಮಾತಾಡಲ್ಲ ಎಂದ ಖರ್ಗೆ, ಎಸ್.ಎಂ.ಕೃಷ್ಣ ಅವರು ಒಳ್ಳೆಯ ಕೆಲಸ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಟಾಂಗ್ ನೀಡಿದ್ರು.