ಬೆಂಗಳೂರು: ರಾಜ್ಯದ ಮರಳು ಕೊರತೆಯನ್ನು ನೀಗಿಸಲು ಹಾಗೂ ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಮರಳು ಪೂರೈಸುವ ಸಂಬಂಧ ಸಿದ್ದರಾಮಯ್ಯ ಸರ್ಕಾರ ಮಲೇಷ್ಯಾ ಮರಳನ್ನು ಆಮದು ಮಾಡಿಕೊಂಡಿತ್ತು. ಆದರೆ ಈಗ ಮಲೇಷ್ಯಾ ಮರಳು ವಿಫಲತೆಯ ಹಾದಿ ಹಿಡಿದಿದ್ದು, ಬಿಜೆಪಿ ಸರ್ಕಾರ ಮಲೇಷ್ಯಾ ಮರಳಿಗೆ ತಿಲಾಂಜಲಿ ಹಾಡಲು ಮುಂದಾಗಿದೆ.
2017ರಲ್ಲಿ ಮಲೇಷ್ಯಾದಿಂದ ಮರಳು ಆಮದಿಗೆ ಅಂದಿನ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಎಂಎಸ್ಐಎಲ್ ಸೇರಿ ನಾಲ್ಕು ಸಂಸ್ಥೆಗಳು ಮಲೇಷ್ಯಾದಿಂದ ಮರಳನ್ನು ಆಮದು ಮಾಡಿಕೊಂಡಿತ್ತು. ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಹಾಗೂ ಮಂಗಳೂರು ಬಂದರಿಗೆ ಮಲೇಷ್ಯಾ ಮರಳು ತರಲಾಗಿತ್ತು. ಮಲೇಷ್ಯಾ ಮರಳನ್ನು ಆಮದು ಮಾಡಿ ಮೂರು ವರ್ಷ ಕಳೆದರೂ ಆ ಮರಳನ್ನು ಖರೀದಿ ಮಾಡುವವರೇ ಇಲ್ಲದಂತಾಗಿದೆ. ಸ್ವಲ್ಪ ಮಟ್ಟಿಗೆ ಬೆಂಗಳೂರಿನಲ್ಲಿ ಎಂಎಸ್ಐಎಲ್ ಮಲೇಷ್ಯಾ ಮರಳನ್ನು ಮಾರಾಟ ಮಾಡುತ್ತಿದ್ದರೂ, ಬೇಡಿಕೆ ಮಾತ್ರ ನೀರಸವಾಗಿದೆ ಎಂದು ಎಂಎಸ್ಐಎಲ್ ಮರಳು ಮಾರಾಟ ವಿಭಾಗದ ಮ್ಯಾನೇಜರ್ ಜೀವನ್ ಪ್ರಸಾದ್ ಒಪ್ಪಿಕೊಂಡಿದ್ದಾರೆ.
ಒಟ್ಟು ಆಮದು ಮಾಡಿಕೊಂಡ ಮರಳು: ಎಂಎಸ್ಐಎಲ್, ಇಂಟಗ್ರೇಟೆಡ್ ಸರ್ವಿಸ್ ಪಾಯಿಂಟ್, ಟಿಎಂಟಿ ಮತ್ತು ಆಕಾರ್ ಎಂಟರ್ ಪ್ರೈಸಸ್ ಎಂಬ ನಾಲ್ಕು ಸಂಸ್ಥೆಗಳು ಮಲೇಷ್ಯಾ ಮರಳನ್ನು ಆಮದು ಮಾಡಿವೆ. ಎಂಎಸ್ಐಎಲ್ ಸಂಸ್ಥೆ ತಂದ ಮರಳನ್ನು ಕೃಷ್ಣ ಪಟ್ಟಣಂ ಬಂದರಲ್ಲಿ ಸಂಗ್ರಹಿಸಿಡಲಾಗಿದೆ. ಇನ್ನು ಇಂಟಗ್ರೇಟೆಡ್ ಸರ್ವಿಸ್ ಪಾಯಿಂಟ್, ಟಿಎಂಟಿ ಮತ್ತು ಆಕಾರ್ ಎಂಟರ್ ಪ್ರೈಸಸ್ ಸಂಸ್ಥೆಗಳು ಮಲೇಷ್ಯಾದಿಂದ ಆಮದು ಮಾಡಿದ ಮರಳನ್ನು ಮಂಗಳೂರು ಬಂದರಿನಲ್ಲಿ ಇರಿಸಲಾಗಿದೆ.
ಕೃಷ್ಣ ಪಟ್ಟಣಂನಲ್ಲಿ ಸುಮಾರು 99,401 ಮೆಟ್ರಿಕ್ ಟನ್ ಮಲೇಷ್ಯಾ ಮರಳು ದಾಸ್ತಾನಿಡಲಾಗಿದ್ದರೆ, 1,48,100 ಮೆಟ್ರಿಕ್ ಟನ್ ಮಲೇಷ್ಯಾ ಮರಳು ಮಂಗಳೂರು ಬಂದರಿನಲ್ಲಿ ಸಂಗ್ರಹಿಸಲಾಗಿದೆ. ಬಂದರಿನಿಂದ 1,52,859 ಮೆಟ್ರಿಕ್ ಟನ್ ಮಲೇಷ್ಯಾ ಮರಳನ್ನು ಸ್ಟಾಕ್ ಯಾರ್ಡ್ಗಳಿಗೆ ಸಾಗಿಸಲಾಗಿದೆ.
ಮಲೇಷ್ಯಾ ಮರಳನ್ನು ಕೊಳ್ಳುವವರೇ ಇಲ್ಲ!: ಕೊರತೆ ನೀಗಿಸಲು ಮಲೇಷ್ಯಾ ಮರಳನ್ನು ಆಮದು ಮಾಡಿಕೊಳ್ಳಲಾಯಿತು. ಆದರೆ ಈ ಮಲೇಷ್ಯಾ ಮರಳನ್ನು ಖರೀದಿಸಲು ಮಾತ್ರ ಯಾರೂ ಮುಂದೆ ಬರುತ್ತಿಲ್ಲ. ಗುಣಮಟ್ಟದ ಬಗ್ಗೆ ಅನುಮಾನ ಇರುವುದರಿಂದ ಮಲೇಷ್ಯಾ ಮರಳು ಖರೀದಿಗೆ ಯಾರೂ ಮುಂದಾಗುತ್ತಿಲ್ಲ. ಒಟ್ಟು 2,47,501 ಮೆಟ್ರಿಕ್ ಟನ್ ಮರಳಿನ ಪೈಕಿ ಈವರೆಗೆ ಮಾರಾಟವಾಗಿರುವುದು ಕೇವಲ 49,213 ಮೆಟ್ರಿಕ್ ಟನ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿಅಂಶ ಪ್ರಕಾರ ಮಲೇಷ್ಯಾ ಮರಳನ್ನು ಖರೀದಿಸುವವರೇ ಇಲ್ಲ ಅನ್ನೋದು ಸಾಬೀತಾಗಿದೆ.
ಕೃಷ್ಣ ಪಟ್ಟಣಂ ಬಂದರಿನಲ್ಲಿ ಸಂಗ್ರಹಿಸಿದ್ದ ಮಲೇಷ್ಯಾ ಮರಳಿನಲ್ಲಿ ಕೇವಲ 1,422 ಮೆಟ್ರಿಕ್ ಟನ್ ಮರಳು ಮಾರಾಟವಾಗಿದೆ. ಇನ್ನು ಮಂಗಳೂರು ಬಂದರಿನಲ್ಲಿ ಸಂಗ್ರಹಿಸಿದ್ದ ಮಲೇಷ್ಯಾ ಮರಳಿನಲ್ಲಿ ಕೇವಲ 47,791 ಮೆ.ಟನ್ ಮಾತ್ರ ಈವರೆಗೆ ಮಾರಾಟವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿ ಅಂಶಗಳೇ ಮಲೇಷ್ಯಾ ಮರಳು ಯೋಜನೆ ವಿಫಲವಾಗಿದೆ ಎಂಬುದನ್ನು ಸಾರಿ ಹೇಳುತ್ತದೆ.
ಮಲೇಷ್ಯಾ ಮರಳು ಆಮದು ಸ್ಥಗಿತ?: ಮಲೇಷ್ಯಾ ಮರಳಿಗೆ ಮೊದಲಿನಿಂದಲೂ ಬಿಜೆಪಿ ವಿರೋಧ ಮಾಡುತ್ತಲೇ ಬಂದಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮಲೇಷ್ಯಾ ಮರಳಿನ ಆಮದನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಒಂದೆಡೆ ಮಲೇಷ್ಯಾ ಮರಳಿಗೆ ನೀರಸ ಪ್ರತಿಕ್ರಿಯೆ ಇದೆ. ಹೀಗಾಗಿ ಬಹುತೇಕ ಆಮದು ಮರಳು ಬಂದರಿನಲ್ಲೇ ಹಾಗೇ ಮಾರಾಟವಾಗದೇ ಉಳಿದುಕೊಂಡಿರುವುದರಿಂದ ಮತ್ತೆ ಮರಳು ಆಮದಿಗೆ ಸರ್ಕಾರ ಒಲವು ತೋರುತ್ತಿಲ್ಲ. ಜೊತೆಗೆ ಮಲೇಷ್ಯಾ ಮರಳಿನಲ್ಲಿ ಅಕ್ರಮ ಬಗ್ಗೆ ತನಿಖೆ ನಡೆಸಲೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಸಿ.ಸಿ.ಪಾಟೀಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.