ಬೆಂಗಳೂರು: ಫೋರ್ಟಿಸ್ ಆಸ್ಪತ್ರೆಯೂ ಇದೇ ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೊಬೊಟಿಕ್ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಈ ತಂತ್ರಜ್ಞಾನದ ಮೂಲಕ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ಕುರಿತು ಬುಧವಾರ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ ಹುಲ್ಸೆ, ಮ್ಯಾಕೋ ರೊಬೊಟಿಕ್ ಆರ್ಮ್ ಅಸಿಸ್ಟೆಡ್ ಟೆಕ್ನಾಲಜಿ ಬಳಸಿ ಬಹು ಅಸ್ವಸ್ಥತೆಯಿಂದ ಬಳಲುತ್ತಿದ್ದ 66 ವರ್ಷದ ಆಫ್ರಿಕನ್ ರೋಗಿಗೆ ಹೊಸ ಜೀವನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಆಫ್ರಿಕನ್ ರೋಗಿಯು ಕಳೆದ 15 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕಾಲ ಕ್ರಮೇಣ ಅವರ ಆರೋಗ್ಯ ಸ್ಥಿತಿ ಕ್ಷೀಣಿಸ ತೊಡಗಿತು. ಮೊಣಕಾಲು ನೋವಿನ ಜೊತೆಗೆ ಅಧಿಕ ರಕ್ತದೊತ್ತಡ, ಅಸ್ತಮಾ ಮತ್ತು ಜನ್ಮಜಾತ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ರೋಗಿಯು ಸಂಧಿವಾತದಿಂದಾಗಿ ಎರಡೂ ಮೊಣಕಾಲುಗಳು ಸಂಪೂರ್ಣವಾಗಿ ಹಾನಿಗೊಳಗಾದವು. ರೋಗಿಯು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಎರಡೂ ಮೊಣಕಾಲುಗಳಿಗೆ ಪ್ರತ್ಯೇಕವಾಗಿ 3 ದಿನಗಳ ಅಂತರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದೆವು ಎಂದು ತಿಳಿಸಿದರು.
3D ವರ್ಚುವಲ್ ಮಾದರಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೊಬೊಟಿಕ್ ತಂತ್ರಜ್ಞಾನ ಬಳಕೆಮಾಡಿದೆವು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೊಬೊಟಿಕ್-ಆರ್ಮ್ ಮೂಳೆಯನ್ನು ಸರಿಯಾದ ಕೋನದಲ್ಲಿ ವಿಭಜಿಸಲು ನೆರವು ನೀಡಿತು. ಈ ಮೂಲಕ ಅವರಿಗೆ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಅದರಲ್ಲಿ ಯಶಸ್ವಿ ಕಂಡೆವು ಎಂದು ವಿವರಿಸಿದರು.
ಕೇವಲ 2 ವಾರಗಳಲ್ಲಿ ತಮ್ಮ ತಾಯ್ನಾಡಿಗೆ ತೆರಳಿದ ರೋಗಿ: ಈ ರೋಬೋಟಿಕ್ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ತಕ್ಷಣವೇ ಚೇತರಿಸಿಕೊಂಡರು. ಕ್ರಮೇಣ ಅವರ ಆರೋಗ್ಯ ಸುಧಾರಿಸಿದೆ. ಪ್ರಸ್ತುತ ತಮ್ಮ ದೈನಂದಿನ ಚಟುವಟಿಕೆಗಳನ್ನು ಯಾರ ನೆರವೂ ಇಲ್ಲದೇ ಸ್ವಯಂ ಮಾಡಿಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಯಾದ ಕೇವಲ 2 ವಾರಗಳಲ್ಲಿ ರೋಗಿಯು ತಮ್ಮ ತಾಯ್ನಾಡಿಗೆ ತೆರಳಿದ್ದಾರೆ ಎಂದು ತಿಳಿಸಿದರು.
ಅನೇಕ ತಂತ್ರಜ್ಞಾನಗಳ ಪರಿಚಯ: ಮಾಧ್ಯಮಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್‌ನ ಬ್ಯುಸಿನೆಸ್ ಹೆಡ್ ಅಕ್ಷಯ್ ಒಲೇಟಿ, ಮ್ಯಾಕೋ ಎಂಬ ರೋಬೋಟಿಕ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲಾಗಿದ್ದು ಮೊಣಕಾಲು ಮತ್ತು ಸಂಪೂರ್ಣ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸುಲಭಗೊಳಿಸಿದೆ ಎಂದರು.
ಇದನ್ನೂ ಓದಿ : ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು ಬಿಡುಗಡೆ.. ಒಮ್ಮೆ ಚಾರ್ಜ್ ಮಾಡಿ 200 ಕಿಮೀ ದೂರ ಕ್ರಮಿಸಿ