ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳು ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಸೂಕ್ತ ಸಂದರ್ಶನ ವ್ಯವಸ್ಥೆ ಕಲ್ಪಿಸಲು ಮುಂದಿನ ಎರಡು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
2018ರ ಮೇ 8ರಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಜೈಲುಗಳ ಸುಧಾರಣೆಗಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲ ವೈ.ಹೆಚ್. ವಿಜಯಕುಮಾರ್ ಅವರು ಕೇಂದ್ರ ಕಾರಾಗೃಹದಲ್ಲಿನ ಭೇಟಿ ವ್ಯವಸ್ಥೆಯ ಕುರಿತು ಪೀಠಕ್ಕೆ ಮಾಹಿತಿ ನೀಡಿ ಕೆಲ ಫೋಟೋಗಳನ್ನು ಸಲ್ಲಿಸಿದರು.
ಫೋಟೋಗಳನ್ನು ಗಮನಿಸಿದ ಪೀಠ, ಸಂದರ್ಶನ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಇಲ್ಲ. ಏಕ ಕಾಲಕ್ಕೆ ಐದಾರು ಕೈದಿಳೊಂದಿಗೆ ಅವರ ಕುಟುಂಬಸ್ಥರು ಮಾತನಾಡುತ್ತಿರುವುದು ಕಾಣುತ್ತಿದೆ. ಕೈದಿಗಳು ಮತ್ತು ಸಂದರ್ಶಕರ ಖಾಸಗಿತನ ನಿರ್ಲಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಎಪ್ರಿಲ್ 15ಕ್ಕೆ ಮುಂದೂಡಿತು.