ಆನೆಕಲ್: ಮಹಾತ್ಮ ಗಾಂಧಿ ಪುಣ್ಯ ತಿಥಿ ಹಿನ್ನೆಲೆ ನಗರದಲ್ಲಿ ಮೇಣದ ಬತ್ತಿ ಹಚ್ಚಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಸಿಎಎಗೆ ವಿರೋಧ ವ್ಯಕ್ತಪಡಿಸಲಾಯಿತು.
ಬೆಂಗಳೂರು-ಬನ್ನೇರುಘಟ್ಟ ರಸ್ತೆಯ ಐಐಎಂಬಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಸಮೂಹ ರಸ್ತೆ ಬದಿಯ ಪಾದಚಾರಿ ಮಾರ್ಗದ ಅಂಚಿನಲ್ಲಿ ಮೇಣದ ಬತ್ತಿ ಹೊತ್ತಿಸಿ ಸಿಎಎ ವಿರೋಧಿಸುವ ಫಲಕ ಹಿಡಿದು ದೇಶವನ್ನು ಇಬ್ಭಾಗ ಮಾಡಬೇಡಿ ಎಂದು ಕರೆ ನೀಡಿದರು.
ಐಐಎಂಬಿ ವಿದ್ಯಾಲಯದ ಪ್ರಾಧ್ಯಾಪಕ ಮಲೈ ಭಟ್ಟಾಚಾರ್ಯ ಮಾತನಾಡಿ, ಗಾಂಧಿ ಹುಟ್ಟಿದ ನಾಡಿನಲ್ಲಿ ಧರ್ಮದ ಹೆಸರಿನಲ್ಲಿ ಪೌರತ್ವ ನೀಡುವುದು ಅಪಾಯದ ಮುನ್ಸೂಚನೆ. ಈ ವಿಚಾರದಲ್ಲಿ ರಾಜಕೀಯ ನಡೆದಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವುದು ನಿಲ್ಲಬೇಕು. ಸರ್ವರೂ ಒಟ್ಟಿಗೆ ಬದುಕುವ ಸಮಾಜ ಸೃಷ್ಟಿಸಬೇಕಿದೆ ಎಂದರು.