ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಆಯುಕ್ತರಾದ ಮಂಜುನಾಥ್ ಪ್ರಸಾದ್, ಸ್ಮಾರ್ಟ್ ಸಿಟಿ ಅಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ವಿಶೇಷ ಆಯುಕ್ತರು ವಿಧಾನಸೌಧದಿಂದ ಎಂಜಿ ರಸ್ತೆವರೆಗೆ ಸೈಕಲ್ ಸವಾರಿ ಮಾಡಿದರು.
ನಗರದಲ್ಲಿ ಶಾಂತಿಗಾಗಿ ಸವಾರಿ-2020 ಕಾರ್ಯಕ್ರಮದ ಭಾಗವಾಗಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸುಮಾರು 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸೈಕಲ್ ಜಾಥಾದ ಬಳಿಕ ಆಯುಕ್ತರು, ಆಡಳಿತಾಧಿಕಾರಿ ಎಂಜಿ ರಸ್ತೆ ಬಳಿಯ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗಾಂಧಿ ಜಯಂತಿ ಕಾರ್ಯಕ್ರಮ ನಡೆಸಿದರು.
30 ಕಿ.ಮೀ ಸೈಕಲ್ ಟ್ರಾಕ್: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ಮಾರ್ಟ್ ಸಿಟಿ ಅಭಿಯಾನದ ಭಾಗವಾಗಿ ನಗರದ ಆಯ್ದ ಪ್ರದೇಶಗಳಲ್ಲಿ 30 ಕಿ.ಮೀ ಸೈಕಲ್ ಟ್ರ್ಯಾಕ್ ಮಾಡಲು ಮುಂದಾಗಿದೆ. ನವೆಂಬರ್ ಒಳಗೆ 5 ಕಿ.ಮೀ, ಮಾರ್ಚ್ ನಲ್ಲಿ 30 ಕಿ.ಮೀ. ಸೈಕಲ್ ಟ್ರ್ಯಾಕ್ ಯೋಜನೆ ಹಾಕಿಕೊಂಡಿದೆ.
ಕಮರ್ಷಿಯಲ್ ಸ್ಟ್ರೀಟ್, ರಾಜಭವನ ರಸ್ತೆ, ರೇಸ್ ಕೋರ್ಸ್ ತಿಮ್ಮಯ್ಯ ರಸ್ತೆ, ಇನ್ಫೆಂಟ್ರಿ ರಸ್ತೆ, ಕ್ವೀನ್ಸ್ ರಸ್ತೆ ಸೇರಿದಂತೆ ಒಟ್ಟು 36 ರಸ್ತೆಗಳಲ್ಲಿ ಹಾಗೂ ರಸ್ತೆಯ ಎರಡೂ ಬದಿಗೆ ಸೈಕಲ್ ಟ್ರ್ಯಾಕ್ ಮಾರ್ಕಿಂಗ್ ಮಾಡಲಿದ್ದಾರೆ.