ಬೆಂಗಳೂರು: ಗಾಂಧೀಜಿ ಕೊಲೆ ಮಾಡಿದವರು, ಇಂದು ಅವರ ಆದರ್ಶದ ಮೇಲೆ, ಹಾಕಿಕೊಟ್ಟ ದಾರಿಯಲ್ಲಿ ಅಧಿಕಾರ ನಡೆಸುತ್ತಿದ್ದೇವೆ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿ, ಬಿಜೆಪಿ ಯಾವತ್ತೂ ಗಾಂಧೀಜಿಯವರನ್ನು ಗೌರವಿಸಿಲ್ಲ. ಅವರ ಆದರ್ಶ ಪಾಲಿಸಿಲ್ಲ. ಅಗತ್ಯ ಬಂದಾಗ ಅವರ ಹೆಸರನ್ನ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಅಧಿಕಾರದ ಆಸೆ ಇರಲಿಲ್ಲ:
ಗಾಂಧೀಜಿಯವರಿಗೆ ಅಧಿಕಾರದ ಬಗ್ಗೆ ಕಿಂಚಿತ್ತೂ ಆಸೆಯಿರಲಿಲ್ಲ. ಜನರ, ದೇಶದ ಹಿತವನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದರು. ಅವರು ಕೊಟ್ಟ ಕೊಡುಗೆ ಅಪಾರ. ತಮ್ಮ ನಡೆ, ನುಡಿಯಿಂದ ಸುಭದ್ರ ದೇಶ ಕಟ್ಟಿದ್ದರು. ಅದರ ನೆಲೆಯಲ್ಲೇ ದೇಶ ಮುಂದುವರಿದಿದೆ.
ರೈತರ ಪರವಾಗಿ ಕಾಂಗ್ರೆಸ್ ಯಾವಾಗಲೂ ಇದೆ. 72 ಸಾವಿರ ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಿದ್ದೇವೆ. ಆದರೆ, ಇಂದು ಬಿಜೆಪಿ ತಾನು ರೈತ ಪರ ಎನ್ನುತ್ತಿದೆ. ಹಿಟ್ಲರ್ ರಕ್ತದವರು ಇವರು. ಇಂತವರು ದೇಶಭಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಸದ್ಭಳಕೆ ಮಾಡಿಕೊಂಡು ಯುವ ಸಮುದಾಯದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಖರ್ಗೆ ದೂರಿದರು.
ದೇಶದ ಐಕ್ಯತೆಗೆ ಇಂದಿರಾ ಗಾಂಧಿ ಪ್ರಾಣ ಕೊಟ್ಟರು. ಗಾಂಧೀಜಿ ಸಹ ದೇಶಕ್ಕಾಗಿ ಪ್ರಾಣ ಬಿಟ್ಟರು. ಇಷ್ಟೆಲ್ಲ ಬಲಿದಾನ ಕೊಟ್ಟವರು ಕಟ್ಟಿದ ಈ ಪಕ್ಷದ ಸದಸ್ಯರು ನಾವು ಜನರಿಗೆ ಸತ್ಯ ತಿಳಿಸಬೇಕು. ಯುವಕರ ಭವಿಷ್ಯದ ಮೇಲೆ ದೇಶದ ಭವಿಷ್ಯ ಅಡಗಿದೆ. ನಾವೆಲ್ಲಾ ಒಗ್ಗಟ್ಟಾಗಿ ಬಿಜೆಪಿ ದುರಾಡಳಿತದ ವಿರುದ್ಧ ದನಿ ಎತ್ತದಿದ್ದರೆ ಎಲ್ಲವನ್ನೂ ಕಳೆದುಕೊಂಡು ಗುಲಾಮಗಿರಿ ಯತ್ತ ಸಾಗಬೇಕಾಗುತ್ತದೆ. ಇದಾಗದಂತೆ ತಡೆಯುವ ಕಾರ್ಯ ಮಾಡಿ. ಪಕ್ಷ ಬಲಪಡಿಸಿ, ದೇಶ ಸದೃಢಗೊಳಿಸಿ ಎಂದು ಮನವಿ ಮಾಡಿದರು.
ಓದಿ: ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಹಿಯಾಳಿಸುವುದೇ ಬಿಜೆಪಿ ಕಾರ್ಯ: ಖರ್ಗೆ
ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಮಾತನಾಡಿ, ದೇಶದಲ್ಲಿ ಶಾಂತಿ, ಅಹಿಂಸೆ ಇರಬೇಕಾದರೆ ಗಾಂಧಿವಾದದ ಅನುಸರಣೆ ಆಗಬೇಕಿದೆ. ಇಂದು ದೇಶವನ್ನು ಗಾಂಧಿವಾದದ ವಿರುದ್ಧ ಕೊಂಡೊಯ್ಯುವವರ ಕೈಲಿ ಅಧಿಕಾರ ಇದೆ. ನಮ್ಮ ಮುಂದಿರುವ ಜವಾಬ್ದಾರಿ ಇವರಿಂದ ಅಧಿಕಾರ ಕಿತ್ತುಕೊಳ್ಳುವುದಾಗಿದೆ. ನಾವು ಈ ಜವಾಬ್ದಾರಿ ನಿಭಾಯಿಸಬೇಕಾಗಿದೆ. ದೇಶ ಅಖಂಡವಾಗಿ ಇರಬೇಕಾದರೆ ಗಾಂಧೀಜಿ ತೋರಿಸಿದ ಮಾರ್ಗದಲ್ಲಿ ಸಾಗಬೇಕು.
ದೇಶ ಒಂದಾಗಿರಬೇಕಾದರೆ ಲೋಕತಂತ್ರ ಮಾರ್ಗದಲ್ಲಿ ಸಾಗಬೇಕು. ನಾವು ಗಾಂಧಿ ಅನುಯಾಯಿಗಳು ಎಂದು ಹೇಳಿಕೊಳ್ಳುವುದಾದರೆ ದೇಶಕ್ಕೆ ಅಪಾಯ ತಂದಿಡುವವರಿಂದ ದೇಶವನ್ನು ರಕ್ಷಿಸಬೇಕು. ಇದೇ ನಿಜವಾಗಿ ಗಾಂಧಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.