ಬೆಂಗಳೂರು: ದೇವರು ಎಷ್ಟು ನನಗೆ ಶಕ್ತಿ ಕೊಟ್ಟಿದ್ದಾನೆ. ಆ ಸಂಪೂರ್ಣ ಶಕ್ತಿ ಬಳಸಿ ವಿಧಾನಸೌಧದಲ್ಲಿ ತೆಗೆದುಕೊಳ್ಳುವ ಎಲ್ಲಾ ತೀರ್ಮಾನ ಈ ಸಮಾಜದ ಏಳಿಗೆಗೆ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಶ್ರೇಷ್ಠ ಮಾನವತಾವಾದಿ. ಪರಿವರ್ತನೆಯ ಸಂಕೇತ ವಾಲ್ಮೀಕಿಯವರು. ಅವರು ಇಡೀ ವಿಶ್ವಕ್ಕೆ ಬೆಳಕನ್ನು ನೀಡಿದರು. ವಾಲ್ಮೀಕಿ ರಾಮಾಯಣ ಬರುವ ಮುನ್ನ ಯಾರಿಗಾದರೂ ರಾಮಾಯಣದ ಬಗ್ಗೆ ಗೊತ್ತಿತ್ತೋ ಇಲ್ವೋ ನನಗೆ ಗೊತ್ತಿಲ್ಲ. ನಾನು ಅತ್ಯಂತ ವಿನಯದಿಂದ ಹೇಳುತ್ತೇನೆ. ನಾನು ಶ್ರೀರಾಮನ ಕಾಲಿನ ದೂಳಿಗೂ ಸಮನಲ್ಲ. ಹಾಗಾಗಿ ಅದನ್ನು ಬೋಧನೆ ಮಾಡಬೇಡಿ. ಶ್ರೀ ರಾಮಚಂದ್ರನಿಗೆ ಅವರೇ ಸರಿಸಾಟಿ. ನನ್ನನ್ನು ಶ್ರೀರಾಮಚಂದ್ರ ಎಂದು ಬೋಧಿಸುವುದನ್ನು ಮುಂದುವರಿಸಬೇಡಿ. ಅದು ಸರಿಯಲ್ಲ ಎಂದು ತಿಳಿಸಿದರು.
ಯಾರಿಗೂ ಗುಲಾಮರಾಗುವುದು ಬೇಡ: ಇದೇ ವೇಳೆ ಶಾಸಕ ರಾಜೂ ಗೌಡರ ಗುಲಾಮನಾಗಿರುವೆ ಶಬ್ದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಜೀವನದಲ್ಲಿ ಯಾರಿಗೂ ಗುಲಾಮನಾಗುವ ಅಗತ್ಯ ಇಲ್ಲ. ನೀನು ಗುಲಾಮನಾಗುವುದಾದರೆ ಬದುಕು ಕೊಟ್ಟ ದೈವಕ್ಕೆ ಗುಲಾಮನಾಗಿರು. ಬದುಕು ಕೊಟ್ಟಿದ್ದಾನೆ, ನ್ಯಾಯ ನೀತಿ ಕೊಟ್ಟಿದ್ದಾನೆ. ಏಕೆ ಬೇಕು ಇದು ನಿಮಗೆ?. ವಾಲ್ಮೀಕಿ ಅಂದರೆ ಸ್ವಾಭಿಮಾನದ ಸಂಕೇತ. ಅಪ್ಪಿತಪ್ಪಿ ಆ ಶಬ್ದ ಮುಂದೆ ಬಳಸಬೇಡಿ. ರಾಜೂ ಗೌಡರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಆದರೆ ವಾಸ್ತವತೆ ಮರೆಯಬಾರದು ಎಂದು ಬುದ್ಧಿವಾದ ಹೇಳಿದರು.
ಸಾಮಾಜಿಕ ನ್ಯಾಯವು ಭಾಷಣದಿಂದ ಸಿಗುವುದಿಲ್ಲ. ಕೃತಿಯಿಂದ ಬರಬೇಕು. ಬದ್ಧತೆಯಿಂದ ಕೆಲಸ ಮಾಡಬೇಕು. ಬರೇ ಭಾಷಣದ ಸರಕಾಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬೊಮ್ಮಾಯಿ, ರಾಮರಾಜ್ಯ ಅಂದರೆ ಎಲ್ಲರಿಗೂ ಸಮಾನವಾದ ಅವಕಾಶ ಕೊಡುವುದಾಗಿದೆ. ಹಲವರು ಮೀಸಲಾತಿ ನೀಡಿದರೆ ನ್ಯಾಯಾಲಯದಲ್ಲಿ ಸಮಸ್ಯೆ ಆಗುತ್ತೆ ಎಂದಿದ್ದರು. ಸಂವಿಧಾನದಲ್ಲಿ ಸಮಾನತೆ ಕೊಡುವ ಅವಕಾಶ ಇದೆ. ಒಂದು ಹೆಜ್ಜೆ ಮುಂದಿಡೋಣ ಆಮೇಲೆ ಬಂದಿದ್ದು ಬರಲಿ. ಇಚ್ಛಾಶಕ್ತಿ ಇರಬೇಕು. ಆ ಮೂಲಕ ಹೆಜ್ಜೆ ಇಟ್ಟಿದ್ದೇವೆ. ಈ ತೀರ್ಮಾನಕ್ಕೆ ಕಾನೂನು ಅಡಿ ಏನೆಲ್ಲಾ ರಕ್ಷಣೆ ಮಾಡಲು ಸಾಧ್ಯ ಅದನ್ನೆಲ್ಲಾ ಮಾಡುತ್ತೇವೆ. ಇದು ನಿಮ್ಮ ಗೆಲುವು, ನಿಮ್ಮ ಹೋರಾಟದ ಗೆಲುವಾಗಿದೆ ಎಂದರು.
ಮೀಸಲಾತಿಗೆ ಯಡಿಯೂರಪ್ಪರ ಕೊಡುಗೆ ಹೆಚ್ಚಿದೆ: ಕಟ್ಟಡ ಕಟ್ಟುವ ಮುನ್ನ ಫೌಂಡೇಶನ್ ಬಹಳ ಮುಖ್ಯ. ಮೀಸಲಾತಿ ಹೆಚ್ಚಿಸುವ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪರ ಪಾತ್ರ ಹೆಚ್ಚಿದೆ ಎಂದು ಸಿಎಂ ಬೊಮ್ಮಾಯಿ ಸ್ಮರಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಮೀಸಲಾತಿ ಸಂಬಂಧ ಕೈ ಚೆಲ್ಲಿದ್ದರು ಎಂಬ ಪ್ರಸನ್ನಾನಂದ ಪುರಿ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ, ಸರ್ವಪಕ್ಷ ಸಭೆ ಮಾಡುವ ಮೊದಲು ಯಡಿಯೂರಪ್ಪಗೆ ಕರೆ ಮಾಡಿದ್ದೆ. ನಮ್ಮ ಅವಧಿಯಲ್ಲಿ ನಡೆಯಬೇಕು ಈಗ ಆಗಲಿಲ್ಲ ಅಂದ್ರೆ ಇನ್ನೂ ಎಂದು ಆಗಲ್ಲ ಎಂದು ಯಡಿಯೂರಪ್ಪ ಅವರು ಹೇಳಿ ಕಳಿಸಿದ್ರು. ಬಳಿಕ ಸರ್ವಪಕ್ಷ ಸಭೆಯಲ್ಲಿ ಎಲ್ಲರ ವಿಶ್ವಾಸ ಪಡೆದು ನಿರ್ಧಾರ ಮಾಡಿದೆವು. ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಜೊತೆಗೆ ರಾಜ್ಯ ಮತ್ತು ರಾಷ್ಟ್ರದ ನಮ್ಮ ನಾಯಕರ ಸಹಕಾರದಿಂದ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ: ಇದೇ ವೇಳೆ ಆರು ಮಂದಿ ಸಾಧಕರಿಗೆ 2022ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಸಿಎಂ ಬೊಮ್ಮಾಯಿ ಗೌರವಿಸಿದರು. ಸಾಮಾಜಿಕ ಕ್ಷೇತ್ರದಿಂದ ಬೆಂಗಳೂರಿನ ಎಲ್.ಮುನಿಸ್ವಾಮಿ, ಕೃಷಿ ಕ್ಷೇತ್ರದಿಂದ ಎನ್.ನಾಗಪ್ಪ, ಬೆಳಗಾವಿಯ ಸಮಾಜ ಸೇವಕ ನಾಗಪ್ಪ ಹೆಚ್.ಕೋಣಿ, ಕಲಬುರಗಿಯ ರಂಗ ಕಲಾವಿದೆ ಪಿ.ಪದ್ಮ, ಮೈಸೂರಿನ ಸಾಮಾಜ ಸೇವಕ ಸುಭಾಷ್ ಎಸ್.ಹೆಚ್., ಕಲೆ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಉಷಾರಾಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ವಿಜೇತರಿಗೆ ಐದು ಲಕ್ಷ ನಗದು ಮೊತ್ತ, 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ತವರಿನಲ್ಲಿ ಡಕೋಟಾ ಬಸ್ಗಳ ಸಂಚಾರ.. ಪ್ರಯಾಣಿಕರು ಹೈರಾಣ