ಬೆಂಗಳೂರು: ಮೈಸೂರು ವಾರಿಯರ್ಸ್ ಫ್ರಾಂಚೈಸಿಯು ಮುಂಬರುವ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಗೆ ತನ್ನ ತಂಡವನ್ನು ಪ್ರಕಟಿಸಿದ್ದು, ಕರುಣ್ ನಾಯರ್ ನಾಯಕನಾಗಿ ಮುಂದುವರೆದಿದ್ದಾರೆ. ಟೂರ್ನಿ ಆಗಸ್ಟ್ 13 ರಿಂದ 29ರ ವರೆಗೆ ನಡೆಯಲಿದೆ.
ಕರುಣ್ ನಾಯರ್ ಮಾತನಾಡಿ, "ಮೈಸೂರು ವಾರಿಯರ್ಸ್‌ನ ಭಾಗವಾಗಿ ಮುಂದುವರಿಯಲು ಮತ್ತು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವುದು ಅತೀವ ಸಂತಸ ತಂದಿದೆ. ಈ ತಂಡದೊಂದಿಗೆ ಮೈದಾನಕ್ಕೆ ಕಾಲಿಡಲು ನಾನು ಉತ್ಸುಕನಾಗಿದ್ದೇನೆ. ಮಾಲೀಕರಾದ ಅರ್ಜುನ್ ಮತ್ತು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಪಾತ್ರವನ್ನು ಪೂರ್ಣವಾಗಿ ಪೂರೈಸಲು ಬದ್ಧ" ಎಂದು ಭರವಸೆ ನೀಡಿದರು.
ತಂಡದ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, "ಮೈಸೂರು ವಾರಿಯರ್ಸ್ ಕೇವಲ ಒಂದು ತಂಡವಲ್ಲ, ಇದು ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್ ಜಗತ್ತಿಗೆ ಹಲವು ರೀತಿಯಲ್ಲಿ ಕೊಡುಗೆ ನೀಡುವ ಮೈಲುಗಲ್ಲಾಗಲಿದೆ. ರಾಜ್ಯಮಟ್ಟದಲ್ಲಿ ಪ್ರತಿಭಾನ್ವೇಷಣೆ ಆರಂಭಿಸಿ, ಭರವಸೆಯ ಪ್ರತಿಭೆಗಳನ್ನು ಗುರುತಿಸಲು ವೇದಿಕೆ ಸಿಕ್ಕಿದೆ. ರಾಷ್ಟ್ರಮಟ್ಟದ ಆಟಗಾರರನ್ನು ತರಬೇತುಗೊಳಿಸುವುದು ಮತ್ತು ತಯಾರಿಸುವುದು, ಮೈಸೂರು ವಾರಿಯರ್ಸ್ ಧ್ಯೇಯ ಮತ್ತು ಭರವಸೆ. ಜನರ ಪ್ರೋತ್ಸಾಹದಿಂದ ಈ ವರ್ಷ ತಂಡ ಇನ್ನಷ್ಟು ಬಲಿಷ್ಠಗೊಂಡಿದೆ. ನಮ್ಮ ಆಟಗಾರರು ಕ್ರೀಡಾಂಗಣಕ್ಕಿಳಿಯಲು ಸಜ್ಜಾಗಿದ್ದಾರೆ" ಎಂದರು.
ಮುಖ್ಯ ತರಬೇತುದಾರ ಆರ್.ಎಕ್ಸ್. ಮುರಳೀಧರ್ ಮಾತನಾಡಿ, "ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಸಂತಸವಾಗುತ್ತಿದೆ. ಮೈಸೂರು ಮಾತ್ರವಲ್ಲದೇ ಭವಿಷ್ಯದಲ್ಲಿ ನಮ್ಮ ರಾಷ್ಟ್ರವನ್ನೂ ಪ್ರತಿನಿಧಿಸುವಂತೆ ಇವರನ್ನು ತಯಾರು ಮಾಡುವ ಗುರಿ ಇದೆ. ತಂಡ ನನಗೆ ಮಹತ್ವದ ಜವಾಬ್ದಾರಿ ನೀಡಿದೆ. ನಿರೀಕ್ಷೆಗಳನ್ನು ಪೂರೈಸುವ ದೃಢ ನಿಶ್ಚಯ ಹೊಂದಿದ್ದೇನೆ. ನಮ್ಮ ತಂಡದ ಸಾಮರ್ಥ್ಯದಲ್ಲಿ ನನಗೆ ಬಲವಾದ ನಂಬಿಕೆಯಿದೆ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸಂಪೂರ್ಣ ಸಹಕಾರ ನಿರೀಕ್ಷಿಸುತ್ತೇನೆ" ಎಂದು ಹೇಳಿದರು.
ನಾಯರ್ ಜೊತೆಗೆ ಪ್ರಸಿಧ್ ಕೃಷ್ಣ, ಸುಚಿತ್.ಜೆ, ಸಮರ್ಥ್.ಆರ್, ಮನೋಜ್ ಭಾಂಡಗೆ, ಕಾರ್ತಿಕ್ ಸಿ.ಎ, ಶೋಯೆಬ್ ಮ್ಯಾನೇಜರ್, ರಕ್ಷಿತ್ ಎಸ್, ವೆಂಕಟೇಶ್.ಎಂ, ಕುಶಾಲ್ ವಾಧ್ವಾನಿ, ಭರತ್ ಧುರಿ, ಮೊನಿಶ್ ರೆಡ್ಡಿ, ತುಷಾರ್ ಸಿಂಗ್, ಶ್ರೀಶಾ ಎಸ್.ಆಚಾರ್, ರಾಹುಲ್, ಸಿಂಗ್ ರಾವತ್, ಶಶಿಕುಮಾರ್ ಕೆ, ಆದಿತ್ಯ ಮಣಿ, ಗೌತಮ್ ಮಿಶ್ರಾ, ಹಾಗೂ ಟ್ಯಾಲೆಂಟ್ ಹಂಟ್‌ನಿಂದ ಆಯ್ಕೆಯಾದ ಲಂಕೇಶ್ ಮತ್ತು ಗೌತಮ್ ಸಾಗರ್ ತಂಡದಲ್ಲಿದ್ದಾರೆ.
ಸಹಾಯಕ ತರಬೇತುದಾರರಾಗಿ ವಿಜಯ್ ಮಡ್ಯಾಳ್ಕರ್, ಬೌಲಿಂಗ್ ಕೋಚ್ ಆಗಿ ಆದಿತ್ಯ ಸಾಗರ್, ಸಹಾಯ ಸಿಬ್ಬಂದಿಗಳಾಗಿ ಶ್ರೀರಂಗ, ಅರ್ಜುನ್ ಹೊಯ್ಸಳ, ಸಚ್ಚಿದಾನಂದ ಅವರನ್ನು ತಂಡ ಒಳಗೊಂಡಿದೆ.
ಇದನ್ನೂ ಓದಿ: Kane Williamson: ವಿಶ್ವಕಪ್ಗೂ ಮುನ್ನವೇ ಕಿವೀಸ್ ನಾಯಕ ವಿಲಿಯಮ್ಸನ್ ಕಮ್‌ಬ್ಯಾಕ್