ಬೆಂಗಳೂರು: ಯಥಾ ರಾಜ ತಥಾ ಪ್ರಜಾ ಎಂಬ ಕಾಲವೊಂದಿವಿತ್ತು. ಆದರೆ ಈಗ ಯಥಾ ಪ್ರಜಾ ತಥಾ ರಾಜ' ಎಂಬ ಮಟ್ಟಕ್ಕೆ ಬಂದಿದೆ. ಮತ್ತೆ ಯಥಾ ರಾಜ, ತಥಾ ಪ್ರಜಾ ಕಾಲಕ್ಕೆ ಬರಬೇಕಾದರೆ ಇನ್ನು ಎಷ್ಟು ವರ್ಷಗಳು ಬೇಕೋ? ಅಂತಹ ಪ್ರಯತ್ನಗಳು ಯಾರಿಂದ ಆರಂಭವಾಗುತ್ತದೋ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಇಂದು ಸಂವಿಧಾನದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಮಾಧ್ಯಮ ಕ್ಷೇತ್ರ ಎಲ್ಲದಕ್ಕೂ ಸ್ಪಷ್ಟವಾದ ಕಾರ್ಯಸೂಚಿಗಳನ್ನು ಸೂಚಿಸಿದೆ. ಎಲ್ಲರೂ ಅವರ ಇತಿಮಿತಿಯಲ್ಲಿ ಕೆಲಸ ಮಾಡಿದ್ದರೆ ಭಾರತ ಯಾವತ್ತೋ ಬದಲಾಗಬೇಕಿತ್ತು. ಆದರೆ ಒಬ್ಬರ ಮೇಲೆ ಒಬ್ಬರು ಹೆಚ್ಚುಗಾರಿಕೆ ತೋರಿಸುತ್ತಾ, ಸಂವಿಧಾನದ ಮೇಲೆ ಅತಿಕ್ರಮಣ ಮಾಡಿ ದೇಶದ ಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾವು ಆತ್ಮಸಾಕ್ಷಿಯನ್ನು ಮುಂದಿಟ್ಟುಕೊಂಡು ಪ್ರಯತ್ನ ಮಾಡುವುದಾದರೆ ವ್ಯವಸ್ಥೆ ಬದಲಾಗಲೇಬೇಕು. ವಸಾಹತುಶಾಹಿ, ಸಾಮ್ರಾಜ್ಯಶಾಹಿ ವಿರುದ್ಧದ ಸಾಮ್ರಾಜ್ಯ ರಚನೆಯಾಯಿತು. ಆದರೆ ಉದ್ದೇಶಗಳು ಈಡೇರಿಲ್ಲ. ಬಡವರಿಗೆ, 2ನೇ ವರ್ಗದ ಜನರಿಗೆ, ಶ್ರಮಜೀವಿಗಳಿಗಾಗಿ ಸಂವಿಧಾನ ಇರಬೇಕಿತ್ತು. ಆದರೆ ಈಗಿನ ಕಾಲದಲ್ಲಿ ದುಡಿದು ಬದುಕುವ ಕಾಲವಿಲ್ಲ ಎಂಬ ಸ್ಥಿತಿ ಇದೆ. ದಿನ 24 ಗಂಟೆ ಕೆಲಸ ಮಾಡುವವರಿಗೆ 240 ರೂ. ಕೂಲಿ ಕೊಡುತ್ತಾರೆ. ಎರಡು ಲೋಡ್ ಲಾರಿಗಳನ್ನು ಅನ್‍ಲೋಡ್ ಮಾಡುವ ಮಧ್ಯವರ್ತಿ ಕ್ಷಣಾರ್ಧದಲ್ಲಿ 50 ಸಾವಿರ ಕಮೀಷನ್ ಸಂಪಾದಿಸುತ್ತಾನೆ ಎಂದರು.
ಗಾಂಧೀಜಿಯವರ ಸ್ವರಾಜ್ಯದ ಕನಸು ನನಸಾಗಿಲ್ಲ. ಸರ್ಕಾರದ ಹಣ ಕಬಳಿಸಲು ಎಲ್ಲರೂ ತಮ್ಮನ್ನು ತಾವು ಹಿಂದುಳಿದವರು ಎಂದು ಹೇಳಿಕೊಳ್ಳಲು ಹವಣಿಸುತ್ತಿದ್ದಾರೆ. ಎಸ್ಟಿ ಪಟ್ಟಿಗೆ ಸೇರಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.